ವಿಜಯಪುರ : ಮುಖ್ಯಮಂತ್ರಿ ಬದಲಾವಣೆ ಅಂಥ ದೊಡ್ಡ ವಿಷಯ ಮಾತನಾಡುವಷ್ಟು ದೊಡ್ಡವನಲ್ಲ. ಆದರೂ, ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ. ನರೇಂದ್ರ ಬಾಬು ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿಯ ಒಬಿಸಿ ಮೋರ್ಚಾ ಸೋಮವಾರ ಏರ್ಪಡಿಸಿದ್ದ ಶ್ಯಾಮಾಪ್ರಕಾಶ ಮುಖರ್ಜಿ ಅವರ ಸ್ಮರಣೆಗಾಗಿ ಲಕ್ಷ ವೃಕ್ಷಾರೋಹಣ ಯೋಜನೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದೆಲ್ಲೆಡೆ ಲಕ್ಷ ವೃಕ್ಷಾರೋಹಣ ಯೋಜನೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂದಿಬೆಟ್ಟ, ಮಹದೇಶ್ವರಸ್ವಾಮಿ ಬೆಟ್ಟ, ಚಾಮುಂಡಿ ಬೆಟ್ಟ ಮುಂತಾಡೆಗಳಲ್ಲಿ 5 ಲಕ್ಷ ಬೀಜದುಂಡೆಗಳನ್ನು (ಸೀಡ್ ಬಾಲ್) ಹಾಕಲಾಗುತ್ತಿದೆ. ರಾಜ್ಯದೆಲ್ಲೆಡೆ ಹಸಿರು ಪಸರಿಸುವಂತೆ ಮಾಡಬೇಕು ಎಂಬ ಉದ್ದೇಶಕ್ಕಾಗಿ ಪಕ್ಷದ ಎಲ್ಲ ಕಾರ್ಯಕರ್ತರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಚೆನ್ನಾಗಿ ನಡೆಯುತ್ತಿದೆ. ಮುಂಬರುವ ತಾಲೂಕು ಹಾಗೂ ಜಿಪಂ ಚುನಾವಣೆಗಳಲ್ಲಿ ಬಹುಮತ ಪಡೆಯಲು ಬಿಜೆಪಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕರೊನಾ ಪಿಡುಗಿನ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಲವು ಜನಪಯೋಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಅವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಬಿಜೆಪಿಯ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕನಕರಾಜು, ಕಾರ್ಯಕಾರಿ ಸದಸ್ಯ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಸುನೀಲ್ ಸುಂದರೇಶ್, ಕಾರ್ಯದರ್ಶಿ ರವಿಕುಮಾರ್, ರಾಜ್ಯ ಪರಿಷತ್ ಸದಸ್ಯ ದೇ.ಸು. ನಾಗರಾಜ್, ಪುರಸಭೆ ಸದಸ್ಯೆ ಶಿಲ್ಪಾ, ಮಾಜಿ ಸದಸ್ಯ ಆರ್.ಸಿ. ಮಂಜುನಾಥ್, ಟೌನ್ ಬಿಜೆಪಿ ಅಧ್ಯಕ್ಷ ಚ. ವಿಜಯಬಾಬು, ಮಾಜಿ ಅಧ್ಯಕ್ಷರಾದ ಭೈರೇಗೌಡ, ರಾಮು ಭಗವಾನ್, ಪ್ರಭು, ಸಾಗರ್ ಮತ್ತಿತರರಿದ್ದರು.