ಜಿಲ್ಲೆ

ಕಲ್ಲು ಕುಟುಕರಿಗೂ ಆರ್ಥಿಕ ಸಹಾಯ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ

ಕೋಲಾರ: ಕರೊನಾ ಲಾಕ್‌ಡೌನ್‌ನಿಂಸಂಕಷ್ಟಕ್ಕೀಡಾಗಿರುವ ಕಲ್ಲುಕುಟುಕರಿಗೂ ಆರ್ಥಿಕ ಸಹಾಯ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕ ಚಿಂತನೆ ನಡೆಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಕರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಸಕ್ರಿಯ ಕಾರ್ಯಕರ್ತರಿಗೆ ಮಿಡಿಯುವ ಹೃದಯಗಳು ಸಂಸ್ಥೆಯು ನೀಡಿದ ದಿನಸಿ ಕಿಟ್‌ಗಳನ್ನು ನಗರದ ಡೂಂಲೈಟ್ ವೃತ್ತದಲ್ಲಿರುವ ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ಕಚೇರಿಯಲ್ಲಿ ಭಾನುವಾರ ವಿತರಿಸಿ ಮಾತನಾಡಿ, ಮುಖ್ಯಮಂತ್ರಿಯವರು ಈಗಾಗಲೇ ಅನೇಕ ವರ್ಗದವರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ಯಾಕೇಜ್‌ನಲ್ಲಿ ಕೈ ಬಿಟ್ಟುಹೋಗಿರುವ ವರ್ಗಗಳ ಬಗ್ಗೆ ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ತೀವ್ರ ಬಡತನದಲ್ಲಿರುವ ಕಲ್ಲು ಕುಟುಕರಿಗೂ ಧನಸಹಾಯ ನೀಡಲು ಸಮ್ಮತಿಸಿದ್ದು, ಇನ್ನಷ್ಟು ಹೆಚ್ಚಿನ ಕಾರ್ಯ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ, ದೇಶದಲ್ಲಿ ರಾಜಕೀಯ ಪಕ್ಷಗಳು ಬೇಕಾದಷ್ಟಿವೆ, ಆದರೆ ಸಂಕಷ್ಟದ ಸಮಯದಲ್ಲಿ ಯಾರು ನೆರವಿಗೆ ಧಾವಿಸುತ್ತಾರೆ ಎನ್ನುವುದು ಕರೊನಾ ಸಂದರ್ಭದಲ್ಲಿ ಜನರಿಗೆ ಅರ್ಥವಾಗಿದೆ. ನಮ್ಮ ಮುಖಂಡರು ತಮ್ಮ ಭಾಗದ ಬಡ ಜನರನ್ನು ಗುರುತಿಸಿ ಲಸಿಕೆ, ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದರೆ ಪ್ರತಿಪಕ್ಷಗಳು ಕಣ್ಮರೆಯಾಗುವುದರಲ್ಲಿ ಸಂಶಯವಿಲ್ಲ. ಇನ್ನಷ್ಟು ಕೆಲಸವನ್ನು ಶ್ರದ್ಧೆಯಿಂದ ಮಾಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ದೇಶದಲ್ಲಿ ಕರೊನಾಗೆ ಲಸಿಕೆ ಕಂಡುಹಿಡಿದು ಜನರಿಗೆ ನೀಡಲು ತೀರ್ಮಾನಿಸಿದಾಗ ಪ್ರತಿಪಕ್ಷಗಳು ಜನರ ದಿಕ್ಕು ತಪ್ಪಿಸುವ ರೀತಿ ಹೇಳಿಕೆ ನೀಡಲಾರಂಭಿಸಿದರು. ಆದರೂ ಇಂದು 20 ಕೋಟಿ ಜನರು ಲಸಿಕೆ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ನಂತರ ಕೋಲಾರ ಜಿಲ್ಲೆಯಲ್ಲೇ ಅತಿಹೆಚ್ಚು ಲಸಿಕಾ ಕಾರ್ಯ ನಡೆದಿದೆ. ಇದಕ್ಕೆ ಮತ್ತಷ್ಟು ಪ್ರೇರಣೆ ನೀಡಬೇಕು ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ ಮಾತನಾಡಿ, ಭಾರತವು ಕರೊನಾ ಮೊದಲನೇ ಅಲೆಯನ್ನು ಸಮರ್ಥವಾಗಿ ಎದುರಿಸಿದೆ. 2ನೇ ಅಲೆಯಲ್ಲಿ ಕೊಂಚ ಸಮಸ್ಯೆಯಾಗಿ ಅನೇಕರನ್ನು ಕಳೆದುಕೊಂಡಿದ್ದೇವೆ. ಜೀವ, ಜೀವನ ಬಹಳ ಮುಖ್ಯ. ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ನಾನಾ ತೊಂದರೆಯಾಗಿದೆ. ಉಳ್ಳವರು ಇಲ್ಲದವರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಸಹಾಯಹಸ್ತ ನೀಡಿರುವುದು ನಿಜಕ್ಕೂ ಶ್ಲಾಘನೀಯ.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ವಕ್ಫ್ ಬೋರ್ಡ್ ಅಧ್ಯಕ್ಷ ಜಾಮೀನ್ ಉಲ್ಲಾಖಾನ್, ಕುಡಾ ಸದಸ್ಯೆ ಅರುಣಮ್ಮ, ಮುಖಂಡ ಸಾ.ಮಾ.ಅನಿಲ್ ಬಾಬು ಮತ್ತಿತರರು ಇದ್ದರು.

ಬೂತ್ ಮಟ್ಟದಲ್ಲಿ ಸಹಾಯ: ಮಿಡಿಯುವ ಹೃದಯಗಳು ಸಂಸ್ಥೆಯಿಂದ ಮೊದಲನೇ ಅಲೆಯಲ್ಲಿ ಪ್ರತಿದಿನ 2,500 ಆಹಾರ ಪೊಟ್ಟಣಗಳನ್ನು ಬಡವರು, ನಿರ್ಗತಿಕರಿಗೆ ನೀಡಲಾಯಿತು. ಈ ಬಾರಿ ಪ್ರಚಾರಕ್ಕೆ ಬಾರದೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಕೇತಿಕವಾಗಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿಯೂ ಹೆಚ್ಚಿನ ಸಹಾಯ ಮಾಡಲಾಗುವುದು ಎಂದು ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.