ಎನ್ ವಿ ಮೈದಾನದಲ್ಲಿ ಇಂದು ಸಿದ್ಧರಾಮಯ್ಯ ಖರ್ಗೆ ಉದ್ಘಾಟನೆ | ಫೈನಲ್ ಸಿದ್ಧತೆ ಪರಿಶೀಲಿಸಿದ ಸಚಿವರಾದ ಕೆ.ಜೆ.ಜಾರ್ಜ್ ಪ್ರಿಯಾಂಕ್
ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ``ಗೃಹ ಜ್ಯೋತಿ`` ಯೋಜನೆ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಶರಣರ ಸೂಫಿ ಸಂತರ ನಾಡು ಕಲಬುರಗಿ ಸಜ್ಜುಗೊಂಡಿದೆ. ಇಡಿ ನಾಡಿನ ಜನರ ಮನೆ ಬೆಳಗಲಿರುವ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡುವ ಯೋಜನೆಗೆ ತೊಗರಿ ನಾಡಿನಿಂದ ಚಾಲನೆ ಸಿಗುತ್ತಿದೆ. ಈ ಮೂಲಕ ಕರುನಾಡಿಗೆ ಬೆಳಕಾಗಲು ಕಲಬುರಗಿ ಅಣಿಗೊಂಡಿದ್ದು ಕ್ಷಣಗಣನೆ ಶುರವಾಗಿದೆ.
೧೧ ಗಂಟೆಗೆ ದೆಹಲಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತರರು ವಿಶೇಷ ವಿಮಾನ ಮೂಲಕ ಕಲಬುರಗಿ ಏರ್ ಪೋರ್ಟ್ ಗೆ ಆಗಮಿಸಿ ಅಲ್ಲಿಂದ ಸಮಾರಂಭ ಆಯೋಜಿಸಿದ ನೂತನ ವಿದ್ಯಾಲಯ ಮೈದಾನಕ್ಕೆ ಆಗಮಿಸಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವರು. ಖರ್ಗೆ ಅವರು ಈಗಾಗಲೇ ದೆಹಲಿಯಿಂದ ಕಲಬುರಗಿ ಕಡೆಗೆ ನಿರ್ಮಿಸಿದ್ದಾರೆ.
ನಗರದ ಅಪ್ಪನ ಗುಡಿ (ಎಸ್‌ಬಿ ಟೆಂಪಲ್) ರಸ್ತೆಯಲ್ಲಿರುವ ನೂತನ ವಿದ್ಯಾಲಯ ಮೈದಾನದಲ್ಲಿ ರಾಜ್ಯಮಟ್ಟದ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಹಾಕಿ ಸಜ್ಜುಗೊಳಿಸಲಾಗಿದೆ. ಸುಮಾರು ೨೫ ಸಾವಿರ ಜನ ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಗೃಹ ಜ್ಯೋತಿ ಚಾಲನೆಗೆ ಮಾಡಿಕೊಂಡಿರುವ ತಯಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ಫೈನಲ್ ಟಚ್ ನೀಡಲು ಕೆಲವೊಂದು ಸಲಹೆ ನೀಡಿದರು.
ಆ೫ ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಂಟಿಯಾಗಿ ಗೃಹ ಜ್ಯೋತಿ ಯೋಜನೆ ಉದ್ಘಾಟಿಸಿ ಚಾಲನೆ ನೀಡುವರು. ಕಲಬುರಗಿಯಿಂದಲೇ ಯೋಜನೆ ರಾಜ್ಯದೆಲ್ಲಡೆ ಜಾರಿಗೊಳ್ಳಲಿದೆ. ಶರಣರ ನಾಡಿನ ಮೂಲಕ ಕರುನಾಡಿಗೆ ಬೆಳಗಲು ಶುರುವಾಗಲಿರುವುದು ಇತಿಹಾಸ ಪುಟಕ್ಕೆ ಸೇರಲಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ,ಇಂಧನ ಸಚಿವ ಕೆ.ಜೆ.ಜಾರ್ಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಸಚಿವರು, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲೆಯ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು ೨೫ ಸಾವಿರ ಜನ ಆಗಮಿಸುವ ನಿರೀಕ್ಷೆಯಿದ್ದು ಎಲ್ಲ ಪೂರ್ವಸಿದ್ಧತೆ ಪೂರ್ಣಗೊಂಡಿವೆ.
ಎನ್‌ವಿ ಮೈದಾನದಲ್ಲಿನ ವೇದಿಕೆ ನಿರ್ಮಾಣ ಇನ್ನಿತರ ಸಿದ್ಧತೆ ಪರಿಶೀಲಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕರ್ತರೊಂದಿಗೆ ಮಾತನಾಡಿ, ಸಿಎಂ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಜನರಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುತ್ತಿದೆ. ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡು ನಾಲ್ಕನೇ ಗ್ಯಾರಂಟಿಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ.
. ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ೧೦ ಜನ ಫಲಾನುಭವಿಗಳಿಗೆ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಮೂಲಕ ಐತಿಹಾಸಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು ಎಂದು ತಿಳಿಸಿದರು.
ವಿಶ್ವಜ್ಯೋತಿ ಬಸವಣ್ಣನವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಮತ್ತು ತತ್ವಗಳನ್ನು ್ತಅಳವಡಿಸಿಕೊಂಡಿರುವ ನಮ್ಮ ಸರ್ಕಾg Àಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಬೇಕು ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು. ಈಗಾಗಲೇ ಗೃಹ ಜ್ಯೋತಿ ಯೋಜನೆ ಶುರುವಾಗಿದೆ. ಅಧಿಕೃತವಾಗಿ ಶನಿವಾರ ಉದ್ಘಾಟನೆಗೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಚಿವರು ಸಿದ್ಧತೆ ಪರಿಶೀಲಿಸಿದಾಗ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ ಆರ್., ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಜಿಪಂ ಸಿಇಒ ಭಂವಾರ್‌ಸಿAಗ್ ಮೀನಾ, ಡಿಸಿಪಿ ಅಡ್ಡೂರು ಶ್ರೀನಿವಾಸಲು,ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಮೊದಲಾದವರಿದ್ದರು.