ಹುಬ್ಬಳ್ಳಿ : ಜಾತಿ ಗಣತಿ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಅಭಿಪ್ರಾಯಗಳು ಇದ್ದು, ಈ ಬಗ್ಗೆ ಸಾಧಕ-ಬಾಧಕಗಳ ಕುರಿತು ರ್ಚಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದಾಗಿ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಹೊಸ ವಿಷಯ ಜಾರಿಗೆ ತರಲು ಮುಂದಾದಾಗ ಪರ-ವಿರೋಧ ಅಭಿಪ್ರಾಯಗಳು ಸಾಮಾನ್ಯ. ಹಾಗೆಯೇ, ಸ್ವಪಕ್ಷದಲ್ಲಿಯೂ ಈ ಬಗ್ಗೆ ಭಿನ್ನಾಭಿಪ್ರಾಯಗಳು ಇವೆ. ಹೀಗಾಗಿ, ಶೀಘ್ರದಲ್ಲಿ ವಿಶೇಷ ಅಧಿವೇಶನವನ್ನು ಮುಖ್ಯಮಂತ್ರಿ ಅವರು ಕರೆಯಲಿದ್ದಾರೆ ಎಂದರು.
ಜಾತಿ ಗಣತಿಯಿಂದ ಯಾವುದೇ ರಾಜಕೀಯ ಲಾಭ ಇಲ್ಲ. ಆದರೆ, ಜಾತಿಯ ಅಭಿಮಾನ ಅಡ್ಡಿಯಾಗಿದೆ. ಹೀಗಾಗಿ, ಕೆಲವರು ಈ ಬಗ್ಗೆ ಬಹಿರಂಗವಾಗಿ ರ್ಚಚಿಸುತ್ತಿದ್ದರೆ, ಇನ್ನೂ ಕೆಲವರು ಗೌಪ್ಯ ಸಭೆಗಳನ್ನು ಮಾಡುತ್ತಿದ್ದಾರೆ. ಇಂತಹ ಸಭೆಗಳಿಂದ ಕಾಂಗ್ರೆಸ್ಗಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಕೂಲಂಕುಷ ಚರ್ಚೆ ನಡೆದರೆ, ಜನರಿಗೂ ಸಾಧಕ-ಬಾಧಕಗಳ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವುದು ಸತ್ಯ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ನಿಜವಾದದ್ದು. ಆದರೆ, 140 ಶಾಸಕರ ಬೆಂಬಲ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಯಾರಿಂದಲೂ ಕೆಡವಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ಇಡಿ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಈ ನಡುವೆ ನ್ಯಾಯಾಲಯದ ಮೊರೆ ಹೋಗಿ, ನ್ಯಾಯ ಪಡೆಯುತ್ತೇವೆ ಎಂದು ತಿಳಿಸಿದರು.
ವಕ್ಪ್ ಕಾನೂನು ಅನುಷ್ಠಾನಗೊಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ರ್ಚಚಿಸಿ, ಹೈಕಮಾಂಡ್ ಸಲಹೆ ಪಡೆದು ಮುಂದಿನ ತೀರ್ವನವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಸಚಿವ ಜಾರಕಿಹೊಳಿ, ಇವೆಲ್ಲ ನನ್ನ ಅಧಿಕಾರ ವ್ಯಾಪ್ತಿ ಮೀರಿವೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಅಥವಾ ಪಕ್ಷದ ಹೈಕಮಾಂಡ್ ಉತ್ತರ ನೀಡುತ್ತದೆ ಎಂದರು.