ಜಿಲ್ಲೆ

ನುಡಿದಂತೆ ನಡೆದ ಕಾಂಗ್ರೆಸ್

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ :  ನಮ್ಮ ಸರ್ಕಾರದ ಯೋಜನೆಗಳು, ಗ್ಯಾರಂಟಿಗಳು ನಮ್ಮ ಕೈ ಹಿಡಿಯುತ್ತವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಯೋಗೇಶ್ವರ ನಾಮಪತ್ರ ಸಲ್ಲಿಜೆ ನಂತರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡಿರುವ ಕೀರ್ತಿ ನಮಗಿದೆ. ಈ ಹಿನ್ನೆಲೆಯಲ್ಲಿ ಜನರ ಒಲವು ನಮ್ಮ ಪರ ಇದೆ. ಹಾಗಾಗಿ, ಈ ಕ್ಷೇತ್ರದಲ್ಲಿ ನಮಗೆ ಗೆಲುವು ಆಗುತ್ತದೆ. ನಮ್ಮ ಅಭ್ಯರ್ಥಿ ಯೋಗೇಶ್ವರ್ ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ನವರು ಯಾರನ್ನು ಅಭ್ಯರ್ಥಿ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಯೋಗೇಶ್ವರ್ ಎನ್‌ಡಿಎಯಿಂದ ಅನ್ಯಾಯ ಆಗಿದೆ ಎಂದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಸಿದ್ದಾಂತದ ಮೇಲೆ ಅವರಿಗೆ ಗೌರವವಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಅಪಾರವಾದ ಜನಸಂಖ್ಯೆ ಸೇರಿದೆ. ಈ ಜನಸಾಗರಕ್ಕೆ ನಿಮ್ಮ ಕ್ಯಾಮರಾ ಕಣ್ಣು ಸಾಕ್ಷಿ. ಕ್ಷೇತ್ರದ ಜನ ಅಭಿವೃದ್ಧಿ ಕಡೆ ನೋಡುತ್ತಿದ್ದಾರೆ. ಯೋಗೇಶ್ವರ್ ನಮ್ಮ ಪಕ್ಷ ಸೇರಿದ್ದಾರೆ, ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಮುಂದೆ ಚನ್ನಪಟ್ಟಣ ಬದಲಾವಣೆ ಕಾಣುತ್ತದೆ. ಅತಿಹೆಚ್ಚು ವೋಟ್ ಬರುವ ನಿರೀಕ್ಷೆ ಇದೆ. ಯೋಗೇಶ್ವರ್‌ಗೂ ಜನಪ್ರಿಯತೆ ಇದೆ. ಇವತ್ತು ದೊಡ್ಡ ಸಂದೇಶ ದೇಶಕ್ಕೆ ಹೋಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತನಾಡಿ, ನನಗೆ ಆತ್ಮವಿಶ್ವಾಸ ಇದೆ, ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ನಾನು ಎರಡು ಬಾರಿ ಸೋತಿದ್ದೇನೆ. ಅಭಿವೃದ್ಧಿ ಮಾಡಿದರೂ ತಾಂತ್ರಿಕ ಕಾರಣಗಳಿಂದ ಸೋತಿದ್ದೆ ಅಷ್ಟೇ. ನನ್ನನ್ನು ಪಕ್ಷಾಂತರಿ ಅಂತೀರಾ, ಇದು ಬಹಳ ನೋವಾಗುತ್ತೆೆ ಎಂದರು.

ಲೋಕಸಭಾ ಚುನಾವಣೆಯ ಬಳಿಕ ಕುಮಾರಸ್ವಾಮಿ ನಡವಳಿಕೆಯಿಂದ ನನಗೆ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾಗಿತ್ತು. ನಾನು ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುವೆ ಎಂದಾಗಲೂ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಕೊನೆಯ ತಂತ್ರಗಾರಿಕೆಯಂತೆ ಭಾವನಾತ್ಮಕವಾಗಿ ಚುನಾವಣೆ ಮಾಡಲು ಹೊರಟಿದ್ದಾರೆ. ಅವರು ಅಂದುಕೊಂಡಂತೆ ಅವರ ಮಗನನ್ನೇ ಸ್ಪರ್ಧೆ ಮಾಡಿಸುತ್ತಿದ್ದಾರೆ. ಮೊದಲಿಂದಲೂ ಅವರಿಗೆ ಮಗನನ್ನೇ ನಿಲ್ಲಿಸಬೇಕು ಎಂಬುದು ಇತ್ತು. ಅದೇ ರೀತಿ ಈಗ ನಿಖಿಲ್ ಕುಮಾರಸ್ವಾಮಿಯ ಸ್ಪರ್ಧೆ ಮಾಡಿಸುತ್ತಿದ್ದಾರೆ. ಭಾವನಾತ್ಮಕ, ಕಣ್ಣೀರು ಹಾಕಿ ಮಗನನ್ನು ಗೆಲ್ಲಿಸಲು ತಂತ್ರ ಮಾಡಿದ್ದಾರೆ ಎಂದರು.