ಜಿಲ್ಲೆ

ಶನಿವಾರಸಂತೆ ಕ್ಲಸ್ಟರ್ ತಂಡ ಚಾಂಪಿಯನ್

Mysuru - Desk - Yashavanth Kumar N

ಶನಿವಾರಸಂತೆ: ಶಿಕ್ಷಕರ ದಿನಾಚರಣೆ ಅಂಗವಾಗಿ ಸೋಮವಾರಪೇಟೆ ತಾಲೂಕಿನ ವಿವಿಧ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರಿಗೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶನಿವಾರಸಂತೆ ಕ್ಲಸ್ಟರ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ, ಗೋಣಿಮರೂರು, ಕೂಡಿಗೆ ಸೇರಿದಂತೆ ತಾಲೂಕಿನ 10 ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಫೈನಲ್‌ನಲ್ಲಿ ಶನಿವಾರಸಂತೆ ಕ್ಲಸ್ಟರ್ ತಂಡ ಮಾದಾಪುರ ಕ್ಲಸ್ಟರ್ ತಂಡವನ್ನು ಸೋಲಿಸಿತು. ಶನಿವಾರಸಂತೆ ಕ್ಲಸ್ಟರ್ ತಂಡದ ನಾಯಕ ಸಂದೇಶ್ ಸರಣಿ ಪುರುಷೋತ್ತಮ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.