ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಮೋಡ ಮುಸುಕಿದ ವಾತಾವರಣದ ನಡುವೆ ಆಗಾಗ ಮಳೆ ಬೀಳುತ್ತಿದ್ದು, ಇದರ ಪ್ರಮಾಣದಲ್ಲಿ ಅಲ್ಲಲ್ಲಿ ಏರುಪೇರು ಕಂಡು ಬರುತ್ತಿದೆ.
ಮುಂಗಾರು ಅವಧಿಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಸಮರ್ಪಕವಾಗಿ ವರುಣರಾಯ ಕರುಣೆ ತೋರುತ್ತಿಲ್ಲ. ಅತ್ತ ಮಳೆಯೂ ಇಲ್ಲ, ಇತ್ತ ಬಿಸಿಲು ಇಲ್ಲ ಎನ್ನುವಂತಹ ಪರಿಸ್ಥಿತಿ ಇದ್ದು, ಬಹುತೇಕ ತುಂತುರು ಹನಿಗಳ ಸಿಂಚನ ಹೆಚ್ಚಾಗಿದೆ.
ಮುಂಬರುವ ನಾಲ್ಕೆದು ದಿನಗಳಲ್ಲಿ ಉತ್ತಮ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಸೂಚನೆ ನೀಡಿದೆ. ಮತ್ತೊಂದೆಡೆ ಬದಲಾದ ಮೋಡ ಕವಿದ ವಾತಾವರಣದಿಂದ ಜನರು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದು, ಬೆಚ್ಚಗೆ ಇರಲು ಟೋಪಿ, ಸ್ವೆಟರ್ ಮೊರೆ ಹೋಗಿದ್ದಾರೆ. ಇದರ ನಡುವೆ ಶೀತಕ್ಕೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ಬಹುತೇಕರನ್ನು ಅನಾರೋಗ್ಯ ಬಾಧಿಸುತ್ತಿದ್ದು, ಸಾಮಾನ್ಯ ಶೀತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ, ಔಷಧಗಳನ್ನು ಸೇವಿಸುವುದರ ಪ್ರಮಾಣ ಹೆಚ್ಚಾಗುತ್ತಿದೆ.
ಜಡಿ ಮಳೆಯ ನಡುವೆ ನೈರ್ಮಲ್ಯ ಹದಗೆಟ್ಟಿದ್ದು, ಹಲವೆಡೆ ತ್ಯಾಜ್ಯದ ರಾಶಿ ಕಂಡು ಬರುತ್ತಿದೆ. ರಸ್ತೆಬದಿ, ಚರಂಡಿ, ಗುಂಡಿಯ ಜತೆಗೆ ಮನೆಯ ಸುತ್ತಲು ಹೆಚ್ಚಿಗೆ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಡೆಂ, ಚಿಕೂನ್ಗುನ್ಯಾ ಸೇರಿ ಸಾಂಕ್ರಾಮಿಕ ಕಾಯಿಲೆಗಳೂ ಹರಡುತ್ತಿವೆ. ಇನ್ನು ಮಳೆಗಾಲ, ಅದರಲ್ಲೂ ಶೀತ ವಾತಾವರಣವಿರುವಾಗ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ. ಇದಕ್ಕೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಅನಾರೋಗ್ಯ ಉಂಟಾದಾಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅದರಲ್ಲೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಬಗ್ಗೆ ಎಚ್ಚರ ವಹಿಸಲು ಸಲಹೆ ನೀಡಿದೆ.
ಮಳೆಯ ಪ್ರಭಾವ:
ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಬೆಂಗಳೂರು ಸುತ್ತಲಿನ ಭಾಗಗಳಲ್ಲೂ ಮುಂಬರುವ ನಾಲ್ಕೆದು ದಿನಗಳಲ್ಲಿ ಸಾಧಾರಣಾ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಇತ್ತೀಚೆಗೆ ಮೋಡ ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ಬಿಸಿಲು ಅಪರೂಪ ಎನ್ನುವಂತಾಗಿದೆ. ಇದರ ನಡುವೆ ತಂಪು ಗಾಳಿ ಮತ್ತು ತುಂತುರು ಮಳೆಯ ಹನಿಗಳ ಸಿಂಚನದಿಂದ ಜನರು ಬಹುಬೇಗ ಮನೆಯ ಬಾಗಿಲು ಮುಚ್ಚಿ, ಒಳಗೆ ಕೂರುವಂತಾಗಿದೆ. ಹಿರಿಯ ನಾಗರಿಕರು ಸೇರಿದಂತೆ ವಾಯು ವಿಹಾರಿಗಳು ಓಡಾಡಲು ಮುಂದಾಗುತ್ತಿಲ್ಲ. ಜಿಲ್ಲಾದ್ಯಂತ ತಂಪು ಪಾನೀಯಾಗಳ ಬೇಡಿಕೆ ಕುಸಿದಿದೆ. ಇದೀಗ ಬಹುತೇಕರು ಬಿಸಿ ಬಿಸಿ ಟೀ ಕಾಫಿ, ಹಾಲು ಸವಿಯಲು ಬಯಸುತ್ತಿದ್ದು, ಅಂಗಡಿಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಒಳ್ಳೆಯ ವಹಿವಾಟು ನಡೆಯುತ್ತಿದೆ.
ಮಳೆಯ ನಡುವೆ ಚಟುವಟಿಕೆ:
ಜಿಲ್ಲೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಮಳೆ ಬಿದ್ದಿಲ್ಲ. ಇದರ ನಡುವೆ ಭೂ ಹದ ಕಾರ್ಯ ಮುಗಿಸಿರುವ ರೈತರು ಬಿತ್ತನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ದಿನಪೂರ್ತಿ ನಿರಂತರ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಆಗಾಗ ಮಳೆ ಬೀಳುತ್ತಿದೆ. ಇದು ನಿರೀಕ್ಷೆಗೆ ಅನುಗುಣವಾಗಿ ಇಲ್ಲ. ಮುಂಬರುವ ದಿನಗಳಲ್ಲಿ ಧಾರಾಕಾರ ಮಳೆ ಸುರಿಯಬಹುದು.
ಶ್ರೀನಿವಾಸ್, ರೈತ, ಚಿಕ್ಕಬಳ್ಳಾಪುರ