ರಾಯಚೂರು: ಮುಂಗಾರು ವಿಲವಾಗಿ ರೈತರು ಬೆಳೆದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿರುವುದರಿಂದ ಜಿಲ್ಲೆಯಲ್ಲಿ ಎನ್.ಎಸ್.ಬೋಸರಾಜು ೌಂಡೇಷನ್ ಮತ್ತು ಪಿಕೆಕೆ ಸಂಸ್ಥೆ ಸಹಯೋಗದಲ್ಲಿ ನಾಲ್ಕು ದಿನಗಳ ಮೋಡ ಬಿತ್ತನೆ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಕ್ಯಾಪ್ಟನ್ ವೀರೇಂದ್ರ ಸಿಂಗ್ ಹಾಗೂ ಸಹ ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ಹಾರಾಟ ಆರಂಭಿಸಿದ ಹೆಲಿಕ್ಯಾಪ್ಟರ್ ಕಡಿಮೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಎಸಿಎಲ್-2 ಅಯೋಡೈಡ್ ಹಾಗೂ 20 ಸಾವಿರ ಅಡಿ ಮೇಲೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಲ್ವರ್ ಐಯೋಡೈಡ್ ರಸಾಯನಿಕ ಸಿಂಪರಣೆ ಮಾಡಲಾಯಿತು.
ಹವಾಮಾನ ಇಲಾಖೆ ಮಾಹಿತಿಯೊಂದಿಗೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಮೋಡಗಳು ಇದ್ದರೆ ರಸಾಯನಿಕ ಸಿಂಪರಣೆ ಮಾಡಿದ ಐದು ನಿಮಿಷಗಳಲ್ಲಿ ಮಳೆ ಬರುತ್ತದೆ. ಮೋಡಗಳನ್ನು ಗುರುತಿಸಿ ಹೆಲಿಕ್ಯಾಪ್ಟರ್ ಮೂಲಕ ರಸಾಯನಿಕ ಸಿಂಪರಣೆ ಮಾಡಲಾಯಿತು.
ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಎನ್.ಎಸ್.ಬೋಸರಾಜು ೌಂಡೇಷನ್‌ನ ರವಿ ಬೋಸರಾಜು, ರೈತರು ಬಾಡುತ್ತಿರುವ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವಂತಹ ಕಷ್ಟದ ದಿನಗಳನ್ನು ನೋಡುತ್ತಿದ್ದು, ಮಳೆಯಾಗಿ ರೈತರ ಕಷ್ಟ ನಿವಾರಣೆಯಾಗಲಿ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಪಡೆದು ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಮುಖಂಡರಾದ ಬಸನಗೌಡ ಬಾದರ್ಲಿ, ಶರಣಯ್ಯ ನಾಯಕ, ವಸಂತ ನಾಯಕ, ಬ್ರಿಜೇಶ ಪಾಟೀಲ್, ಶಿವಕುಮಾರ ಅರಕೇರಿ, ಅಮರೇಗೌಡ ಜಂಬಲದಿನ್ನಿ, ಅರುಣ ದೋತರಬಂಡಿ, ಮಹ್ಮದ್ ಶೈಬಾಜ್, ವಿಶ್ವೇಶ್ವರರಾವ್ ಉಪಸ್ಥಿತರಿದ್ದರು.