ತಿ.ನರಸೀಪುರ ಪಟ್ಟಣದ ಶ್ರೀವಿಜಯಭಗವಾನ್ ಚಿತ್ರಮಂದಿರದ ಬಳಿಯಿರುವ ಬಟ್ಟೆ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಬೆಲೆ ಬಾಳುವ ವಸ್ತ್ರಗಳು ಸುಟ್ಟು ಬೂದಿಯಾಗಿವೆ. 
ಜಿಲ್ಲೆ

ಬಟ್ಟೆ ಅಂಗಡಿಯಲ್ಲಿದ್ದ ವಸ್ತ್ರಗಳು ಬೆಂಕಿಗಾಹುತಿ

ರವಿಕುಮಾರ್ ಪಿ. ಕೆ

ತಿ.ನರಸೀಪುರ: ಪಟ್ಟಣದ ಶ್ರೀವಿಜಯಭಗವಾನ್ ಚಿತ್ರಮಂದಿರದ ಬಳಿಯಿರುವ ಬಟ್ಟೆ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಬೆಲೆ ಬಾಳುವ ವಸ್ತ್ರಗಳು ಸುಟ್ಟು ಬೂದಿಯಾಗಿವೆ.

ಸೀನು ಫ್ಯಾಷನ್ ಬಟ್ಟೆ ಅಂಗಡಿಯಲ್ಲಿ ಭಾನುವಾರ ಮಧ್ಯರಾತ್ರಿ ಹೊತ್ತಿಕೊಂಡ ಬೆಂಕಿ ಸೋಮವಾರ ಮುಂಜಾನೆವರೆಗೂ ಧಗದಗಿಸಿ ಉರಿದಿದೆ. ಪರಿಣಾಮ ಕಟ್ಟಡದ ಒಳ ಮತ್ತು ಹೊರಗಿನ ಬಹುಭಾಗ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿದೆ. ಬಟ್ಟೆಗಳಲ್ಲದೆ ಪೀಠೋಪಕರಣ ಹಾಗೂ ಕಟ್ಟಡದ ಅಲಂಕಾರಿಕ ವಸ್ತುಗಳೆಲ್ಲವೂ ಸುಟ್ಟು ಬೂದಿಯಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.

ಪಟ್ಟಣದ ಶ್ರೀ ಭಗವಾನ್ ಚಿತ್ರಮಂದಿರದ ಎಡಭಾಗದ ಹಳೆಯ ಪ್ರೈಮರಿ ಸ್ಕೂಲ್ ರಸ್ತೆಯಲ್ಲಿರುವ ಮೂರು ಅಂತಸ್ತಿನ 13 ಮಳಿಗೆಗಳ ಕಟ್ಟಡದೊಳಗೆ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡದಾಚೆಗೂ ಕಾಣಿಸಿಕೊಂಡಿದೆ. ಅಂಗಡಿ, ಮುಂಗಟ್ಟು ಸಂಪೂರ್ಣವಾಗಿ ಬಂದ್ ಆಗಿದ್ದರಿಂದ ಯಾವುದೇ ಜೀವ ಹಾನಿ ಆಗಿಲ್ಲ. ಬೆಂಕಿಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ಠಾಣೆಗೆ ತಿಳಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ನಿರಂತರ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಾಗಲೇ ಕಟ್ಟಡದ ಬಹುಭಾಗ ಬೆಂಕಿಯ ಕೆನ್ನಾಲಿಗೆ ತುತ್ತಾಗಿತ್ತು.

ನೆರೆ ರಾಜ್ಯದ ಉದ್ಯಮಿಯೊಬ್ಬರಿಗೆ ಸೇರಿದ್ದ ಬಟ್ಟೆ ಅಂಗಡಿ ಇದಾಗಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಕಟ್ಟಡದ ಮಾಲೀಕರೇ ಖುದ್ದಾಗಿ ನಿಂತು ಬೆಂಕಿ ನಂದಿಸುವ ಕಾರ್ಯವನ್ನು ನೋಡಿಕೊಂಡರು.