ಜಿಲ್ಲೆ

ಪ್ಲಾಸ್ಟಿಕ್ ನಿಯಂತ್ರಣಕ್ಕೆ ಬಟ್ಟೆ ಬ್ಯಾಗ್ ಮಂತ್ರ

ಸುನಿಲ್ ಪೊನ್ನೇಟಿ

ಸುನಿಲ್ ಪೊನ್ನೇಟಿ ಮಡಿಕೇರಿ:

ಪರಿಸರಕ್ಕೆ ಹಾನಿಕಾರಕವಾದ ಏಕಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿವೆ. ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಂಗ್ರಹಿಸಿಟ್ಟಿದ್ದರೆ ದಂಡ ಮತ್ತಿತರ ಕ್ರಮಗಳ ಮೂಲಕ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸುವುದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ಆದರೆ ಇವುಗಳಿಗೆ ಬದಲಿಯಾಗಿ ಬೇರೆ ವಸ್ತುಗಳನ್ನು ಬಳಸುವುದಕ್ಕೆ ಯಾರು ಕೂಡ ಉತ್ತೇಜನ ಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ಕೊಡಗಿನ ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ರಾಜ್ಯದಲ್ಲೇ ಮಾದರಿ ಎನ್ನಬಹುದಾದ ಪ್ರಯೋಗಕ್ಕೆ ಮುಂದಾಗಿದೆ.

ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್ ಹಾಸುಹೊಕ್ಕಾದ ನಂತರ ಮಾರುಕಟ್ಟೆಗೆ ತೆರಳುವಾಗ ಜತೆಯಲ್ಲೊಂದು ಬ್ಯಾಗ್ ತೆಗೆದುಕೊಂಡು ಹೋಗುವುದನ್ನೇ ಜನರು ಮರೆತುಬಿಟ್ಟಿದ್ದಾರೆ. ಏನು ಖರೀದಿಸಿದರೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳಲ್ಲಿ ತುಂಬಿಸಿಕೊಂಡು ಬರಬಹುದು ಎನ್ನುವ ಮನೋಭಾವದಿಂದಾಗಿ ಪ್ರತಿ ಮನೆಯಲ್ಲೂ ಪ್ಲಾಸ್ಟಿಕ್ ರಾಶಿ ಬೆಳೆಯುತ್ತಲೇ ಹೋಗುತ್ತಿದೆ. ಇದಕ್ಕೆ ಪೂರಕವಾಗಿ ವ್ಯಾಪಾರಿಗಳೂ ಅಗ್ಗದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳನ್ನೇ ಗ್ರಾಹಕರಿಗೆ ಕೊಟ್ಟು ಸಾಗ ಹಾಕುತ್ತಿರುವುದು ಸಾಮಾನ್ಯವಾಗಿದೆ. ಇದೆಲ್ಲದರ ಒಟ್ಟು ಪರಿಣಾಮದಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಾಣುವಂತಾಗಿದ್ದು, ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್‌ಗಳು ಪರಿಸರ ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತಿವೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಏಕಬಳಕೆ ಪ್ಲಾಸ್ಟಿಕ್‌ಗೆ ನಿಷೇಧ ಹೇರಿದೆ. ಇದನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಆಡಳಿತಗಳಿಗೆ ವಹಿಸಲಾಗಿದೆ. ಹಾಗಾಗಿ ಸ್ಥಳೀಯ ಆಡಳಿತದ ಅಧಿಕಾರಿಗಳು, ಸಿಬ್ಬಂದಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡುವುದು, ಪ್ಲಾಸ್ಟಿಕ್ ಬಳಕೆ ಅಥವಾ ಸಂಗ್ರಹ ಕಂಡುಬಂದರೆ ವಶಪಡಿಸಿಕೊಂಡು ದಂಡ ವಿಧಿಸುವುದು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆಯೇ ಹೊರತೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅಪಾಯಗಳ ಬಗ್ಗೆ ಪ್ಲಾಸ್ಟಿಕ್ ಬಳಕೆಯನ್ನೇ ರೂಢಿಯಾಗಿಸಿಕೊಂಡು ಬಂದಿರುವ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಇವುಗಳಿಗೆ ಪರ್ಯಾಯವಾಗಿ ಪರಿಸರಕ್ಕೆ ಪೂರಕ ವಸ್ತುಗಳನ್ನು ಪರಿಚಯಿಸಿದಾಗ ಮಾತ್ರ ಇಂಥ ವಿನಾಶಕಾರಿ ಪ್ಲಾಸ್ಟಿಕ್‌ಗಳನ್ನು ದೂರ ಮಾಡಬಹುದು ಎನ್ನುವ ತಜ್ಞರು, ಈ ಬಗ್ಗೆ ಸ್ಥಳೀಯ ಆಡಳಿತಗಳೇ ಮುತುವರ್ಜಿ ತೋರಿಸಬೇಕಿದ್ದು, ಪರಿಸರ ಸ್ನೇಹಿ ನಡೆಯ ಬಗ್ಗೆ ಜನರಲ್ಲಿ ಅರಿವು ಉಂಟುಮಾಡುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕಿದೆ ಎನ್ನುತ್ತಾರೆ.

ಇದಕ್ಕೆ ಪೂರಕವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಲೋಚನೆಯೊಂದು ಈಗ ಪರಿಸರ ಪ್ರೇಮಿಗಳ ಮಧ್ಯೆ ಚರ್ಚೆಗೆ ಕಾರಣವಾಗಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗೆ ಪರ್ಯಾಯವಾಗಿ ಜನಸಾಮಾನ್ಯರು ಪರಿಸರಕ್ಕೆ ಪೂರಕವಾದ ಬಟ್ಟೆ ಬ್ಯಾಗ್ ಬಳಸುವಂತೆ ಮಾಡಲು ಪಂಚಾಯಿತಿ ವತಿಯಿಂದಲೇ ಉಚಿತವಾಗಿ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಪಂಚಾಯಿತಿಗೆ ಕಂದಾಯ ಕಟ್ಟಲು ಬರುವ ಸಾರ್ವಜನಿಕರಿಗೆ ಉಡುಗೊರೆ ರೂಪದಲ್ಲಿ ಈ ಬಟ್ಟೆ ಬ್ಯಾಗ್‌ಗಳನ್ನು ಕೊಡಲಾಗುವುದು. ಕಂದಾಯ ವಸೂಲಿ ಮಾಸಾಚರಣೆ ಸಂದರ್ಭ ಪ್ರಾಯೋಗಿಕವಾಗಿ ಇದನ್ನೊಂದು ಅಭಿಯಾನದ ರೀತಿಯಲ್ಲಿ ನಡೆಸಲು ಪಂಚಾಯಿತಿ ನಿರ್ಧರಿಸಿದೆ.

ಸದ್ಯಕ್ಕೆ ೧ ಸಾವಿರ ಬ್ಯಾಗ್‌ಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ ಪಂಚಾಯಿತಿ ನಿಧಿಯಿಂದ ಹಣ ಬಳಸಿಕೊಳ್ಳಲಾಗಿದೆ. ೧೦ ರೂ. ಬೆಲೆಯ ಈ ಬ್ಯಾಗ್‌ಗಳನ್ನು ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಮೊದಲಿಗೆ ಉಚಿತವಾಗಿ ವಿತರಿಸುವುದು ಮಾತ್ರವಲ್ಲದೆ, ನಿಯಮಿತವಾಗಿ ಈ ಬ್ಯಾಗ್‌ಗಳನ್ನು ಬಳಸಲು ಕೂಡ ಅರಿವು ಮೂಡಿಸಲಾಗುತ್ತದೆ. ಪ್ರತಿಯೊಬ್ಬರು ಮನೆಯಿಂದ ತೆರಳುವಾಗ ತಮ್ಮ ಬೈಕ್, ಕಾರ್ ಅಥವಾ ಜೇಬಿನಲ್ಲೂ ಈ ಬ್ಯಾಗ್ ಇಟ್ಟುಕೊಳ್ಳಬಹುದಾಗಿದ್ದು, ಬಹುಪಯೋಗಿ ಆಗಿದೆ. ಸಾಕಷ್ಟು ಬಾರಿ ಪುನರ್ಬಳಕೆಯನ್ನೂ ಮಾಡಬಹುದು. ನಂತರವೂ ಈ ಬ್ಯಾಗ್ ಹೆಚ್ಚುವರಿಯಾಗಿ ಬೇಕಿದ್ದರೆ, ಪಂಚಾಯಿತಿಯಲ್ಲಿ ಖರೀದಿಗೆ ಲಭ್ಯ ಇರುತ್ತದೆ.

ರಾಜ್ಯದಲ್ಲೇ ಈ ಪ್ರಯೋಗ ಮೊದಲು ಎನ್ನಲಾಗುತ್ತಿದೆ. ಹಾರಂಗಿ, ದುಬಾರೆ, ಕುಶಾಲನಗರ, ಚಿಕ್ಲಿಹೊಳೆ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಗುಡ್ಡೆಹೊಸೂರು ಕೇಂದ್ರ ಸ್ಥಳವಾಗಿದ್ದು, ಇಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ನಿಷೇಧ ಇದೆ. ಪ್ಲಾಸ್ಟಿಕ್ ಬಳಕೆ ಮತ್ತು ಸಂಗ್ರಹ ಕಂಡು ಬಂದರೆ ಪಂಚಾಯಿತಿ ವತಿಯಿಂದ ದಂಡ ಹಾಕಲಾಗುತ್ತದೆ. ಇದೀಗ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳಿಗೆ ಬದಲಾಗಿ ಪರಿಸರಕ್ಕೆ ಪೂರಕ ಬಟ್ಟೆ ಬ್ಯಾಗ್‌ಗಳನ್ನು ವಿತರಿಸುತ್ತಿರುವುದರಿಂದ ಜನರ ಪ್ರತಿಕ್ರಿಯೆ ಉತ್ತಮವಾಗಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಮೂಲದಲ್ಲೇ ಕಸ ನಿರ್ವಹಣೆ ವಿಷಯದಲ್ಲಿ ಕೊಡಗು ಈಗಾಗಲೇ ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯ ಎಲ್ಲಾ ಪಂಚಾಯಿತಿಗಳಲ್ಲೂ ಮನೆ ಮನೆಗಳಿಗೂ ಪಂಚಾಯಿತಿ ವತಿಯಿಂದಲೇ ಕೊಡಲಾಗಿರುವ ಕಸದ ಬುಟ್ಟಿಗಳಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ. ಹಾಗಾಗಿ ಪಂಚಾಯಿತಿಯ ವಾಹನಗಳ ಮೂಲಕ ಮೂಲದಿಂದಲೇ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅನುಕೂಲ ಆಗಿರುವುದರಿಂದ ಪಂಚಾಯಿತಿ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಪರಿಸರಕ್ಕೆ ಪೂರಕ ವಾತಾವರಣದಲ್ಲಿ ನಡೆಯುತ್ತಿದೆ. ಪಂಚಾಯಿತಿ ವತಿಯಿಂದಲೇ ಪರಿಸರಕ್ಕೆ ಬಟ್ಟೆ ಬ್ಯಾಗ್ ವಿತರಿಸಿ ಬಳಕೆಗೆ ಉತ್ತೇಜನ ನೀಡುವ ಮೂಲಕ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಈ ಪ್ರಯತ್ನವೂ ರಾಜ್ಯಕ್ಕೆ ಮಾದರಿ ಎಂದು ಹೇಳಲಾಗುತ್ತಿದೆ.

ತಮಿಳುನಾಡಿನ ಗ್ರಾಮ ಪಂಚಾಯಿತಿ ಒಂದರಲ್ಲಿ ನಡೆದಿರುವ ಈ ಪ್ರಯೋಗ ಗಮನ ಸೆಳೆಯಿತು. ಅಲ್ಲಿ ಇದು ಯಶಸ್ವಿಯಾಗಿದೆ. ನಮ್ಮಲ್ಲಿಯೂ ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ನಾವು ಬರೀ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾತ್ರ ಮಾತಾಡುತ್ತೇವೆ. ಬದಲಿ ವಸ್ತುಗಳನ್ನು ಹೇಳುವುದಿಲ್ಲ. ಹಾಗಾಗಿ ಪರಿಸರಕ್ಕೆ ಪೂರಕ ಬಟ್ಟೆ ಬ್ಯಾಗ್‌ಗಳನ್ನು ಪಂಚಾಯಿತಿ ವತಿಯಿಂದ ವಿತರಿಸಲಾಗುತ್ತದೆ. ಹಿರಿಯ ಅಧಿಕಾರಿಗಳು, ಪಂಚಾಯಿತಿ ಆಡಳಿತ ಮಂಡಳಿ ಈ ಪ್ರಯೋಗಕ್ಕೆ ಸಾಥ್ ಕೊಟ್ಟಿದ್ದಾರೆ.
ಎಂ.ಆರ್. ಸುಮೇಶ್, ಪಿಡಿಒ, ಗುಡ್ಡೆಹೊಸೂರು ಗ್ರಾ..ಪಂ

ಪ್ಲಾಸ್ಟಿಕ್ ನಿಯಂತ್ರಣ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಮಾದರಿ ಎನ್ನಬಹುದಾದ ಕ್ರಮ ತೆಗೆದುಕೊಂಡಿದೆ. ಇದೊಂದು ಚಿಕ್ಕ ಯೋಜನೆಯಂತೆ ಕಂಡರೂ ಎಲ್ಲಾ ಪಂಚಾಯಿತಿಗಳಲ್ಲೂ ಅನುಷ್ಠಾನಕ್ಕೆ ಬಂದರೆ ಕ್ರಾಂತಿಕಾರಿ ಬದಲಾವಣೆ ನಿರೀಕ್ಷೆ ಮಾಡಬಹುದು. ಪರಿಸರಕ್ಕೆ ಪೂರಕವಾಗಿ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳದಿದ್ದರೆ ಭವಿಷ್ಯ ತುಂಬಾ ಕೆಟ್ಟದಾಗಿರುತ್ತದೆ.
ಟಿ.ಜಿ. ಪ್ರೇಮಕುಮಾರ್, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು, ಕುಶಾಲನಗರ