ಜಿಲ್ಲೆ

ಪೌರಾಣಿಕ ಕಥೆಗಳೇ ಯಕ್ಷಗಾನದ ಬೆನ್ನೆಲುಬು

ಅದಮಾರು ಈಶಪ್ರಿಯ ತೀರ್ಥರ ಆಶೀರ್ವಚನ

ಯಕ್ಷ ನವಮಿ ಸಮಾರೋಪ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದ ಎಲ್ಲ ಕಲೆಗಳೂ ಸಹ ಪೌರಾಣಿಕ ಹಿನ್ನಲೆಯನ್ನೇ ಹೊಂದಿದೆ. ಪುರಾಣದ ಕಥೆಗಳಿಂದಲೇ ನಮ್ಮ ಹಿರಿಯರು ಪೌರಾಣಿಕ ಪ್ರಸಂಗಗಳನ್ನೂ ಕಲಿತಿದ್ದಾರೆ. ಪೌರಾಣಿಕ ಕಥೆಗಳೇ ಯಕ್ಷಗಾನದ ಬೆನ್ನೆಲುಬಾಗಿದೆ. ನರಹರಿ ತೀರ್ಥರಿಂದ ಅಂದು ಆರಂಭಗೊಂಡಿದೆ ಎನ್ನಲಾದ ಈ ಯಕ್ಷಗಾನ ಕಲೆಯನ್ನು ಇನ್ನಷ್ಟು ಬೆಳೆಸುವ ಆವಶ್ಯಕತೆಯಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಪುತ್ತೂರಿನಲ್ಲಿರುವ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ನಿಮಿತ್ತ 11 ದಿನಗಳ ಕಾಲ ಭಗವತೀ ಯಕ್ಷ ಕಲಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಯಕ್ಷ ನವಮಿ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಶಿಕ್ಷಣದಲ್ಲೂ ವಿದ್ಯಾರ್ಥಿಗಳ ಸಾಧನೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆದು ಪ್ರಜ್ಞಾವಂತ ನಾಗರಿಕರಾಗಲು ಸಾಧ್ಯ. ಈ ಕಲೆ ಕಲಿತ ವಿದ್ಯಾರ್ಥಿಗಳು ಶಿಕ್ಷಣದಲ್ಲೂ ಸಾಧನೆ ಮಾಡಿರುವುದನ್ನು ಕಂಡಿದ್ದೇವೆ. ಯಕ್ಷಗಾನ ಕಲಿತರೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂಬ ಅಳುಕು ಬೇಡ. ಪಾಲಕರು ಮಕ್ಕಳಿಗೆ ಯಕ್ಷಗಾನ ಕಲಿಸಲು ಮುಂದಾಗಬೇಕು ಎಂದರು.

ಹೀಲಿಯಾಣರಿಗೆ ಪ್ರಶಸ್ತಿ ಪ್ರದಾನ

ಯಕ್ಷಗಾನ ಖ್ಯಾತ ಸ್ತ್ರೀ ವೇಷಧಾರಿ ಸಂತೋಷ ಹೀಲಿಯಾಣ ಅವರಿಗೆ 10 ಸಾವಿರ ರೂ. ನಗದು, ಪ್ರಶಸ್ತಿ ಹಾಗೂ ಫಲಕವನ್ನೊಳಗೊಂಡ 7ನೇ ವರ್ಷದ ಯಕ್ಷ ಪ್ರದೀಪ್ತರತ್ನ ಪ್ರಶಸ್ತಿ ನೀಡಿ ಅದಮಾರು ಶ್ರೀಗಳು ಗೌರವಿಸಿದರು. ಸಮಾಜ ಸೇವಕಿ ವೀಣಾ ಎಸ್​. ಶೆಟ್ಟಿ, ಕರ್ಣಾಟಕ ಬ್ಯಾಂಕ್​ನ ಸ್ಥಳೀಯ ಶಾಖೆಯ ಎಜಿಎಂ ವಾದಿರಾಜ ಭಟ್​, ಯುವ ಉದ್ಯಮಿ ನಾಗರಾಜ ಎಸ್​.ಕೆ. ಉಪಸ್ಥಿತರಿದ್ದರು.

ಅಧ್ಯಕ್ಷ ಪ್ರಮೋದ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲೆಯ ಶಾಲಾ-ಕಾಲೇಜು ಮಕ್ಕಳಿಗೆ ಯಕ್ಷ ಹಾಗೂ ರಂಗ ಶಿಕ್ಷಣ ನೀಡಲಾಗುತ್ತಿದೆ. 3 ಸಾವಿರಕ್ಕೂ ಅಧಿಕ ಮಕ್ಕಳು ಪ್ರತಿವರ್ಷ ಯಕ್ಷಗಾನ ಕಲಿಯುತ್ತಿದ್ದಾರೆ. ರಂಗಭೂಮಿ ಉಡುಪಿ ವತಿಯಿಂದ ಈ ಬಾರಿ 20 ಪ್ರೌಢಶಾಲೆಗಳಲ್ಲಿ ನಾಟಕ ಅಭಿನಯದ ಶಿಕ್ಷಣ ನೀಡಲಾಗುತ್ತಿದೆ. ಈ ಅಭಿಯಾನದಿಂದ ಭವಿಷ್ಯದಲ್ಲಿ ಉತ್ತಮ ಯಕ್ಷಗಾನ ಕಲಾವಿದರು ಹಾಗೂ ರಂಗನಟರು ಲಭಿಸಲಿದ್ದಾರೆ. | ಡಾ.ತಲ್ಲೂರು ಶಿವರಾಮ ಶೆಟ್ಟಿ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ.