ಬೇಲೂರು: ಕರೊನಾ ವೈರಸ್ ಹಾಗೂ ಹಕ್ಕಿಜ್ವರ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಟ್ಟಣದಾದ್ಯಂತ ಕೋಳಿ, ಕುರಿ, ಮೀನು ಮಾಂಸದ ಅಂಗಡಿಗಳನ್ನು ಗುರುವಾರದಿಂದ ಈ ತಿಂಗಳ 31ರ ವರೆಗೆ ಬಂದ್ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆದೇಶಿಸಿದ್ದಾರೆ.
ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋಳಿ, ಕುರಿ, ಮೀನು ಮಾಂಸದ ಅಂಗಡಿಗಳ ಮಾಲೀಕರು ಮತ್ತು ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಜತೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ ಪಟ್ಟಣದಾದ್ಯಂತ ಕುರಿ, ಕೋಳಿ, ಮೀನು ಮಾಂಸದ ಅಂಗಡಿಗಳನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾ.31ವರೆಗೆ ಬಂದ್ ಮಾಡಲಾಗುತ್ತಿದೆ. ಅಲ್ಲದೆ ಮಾಂಸದಂಗಡಿಗಳ ಮಾಲೀಕರು ಅಂಗಡಿಗಳನ್ನು ಬಂದ್ ಮಾಡುವ ಮುನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಬಾಗಿಲು ಹಾಕಬೇಕು. ಯಾರಾದರೂ ಕದ್ದುಮುಚ್ಚಿ ಮಾರಾಟ ಮಾಡುವುದು, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇಂತಹದ್ದಕ್ಕೆ ಅವಕಾಶ ನೀಡದೆ ಪುರಸಭೆಯೊಂದಿಗೆ ಸಹಕಾರ ನೀಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಮಾರಣಾಂತಿಕ ಕರೊನಾ ವೈರಸ್ ಹಾಗೂ ಸಾಂಕ್ರಾಮಿಕ ರೋಗಗಳು ವ್ಯಾಪಿಸದಂತೆ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳಾದ ಸ್ವಚ್ಛತೆ, ಇನ್ನೊಬ್ಬರ ಜತೆ ಮಾತನಾಡುವಾಗ ಅಂತರ ಕಾಯ್ದುಕೊಳ್ಳುವುದು, ಕುದಿಸಿದ ನೀರನ್ನೇ ಕುಡಿಯಬೇಕು. ಮತ್ತು ಆಗಿಂದಾಗ್ಗೆ ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುತ್ತಿರಬೇಕು. ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಅಸ್ಲಂಪಾಷಾ ಮಾತನಾಡಿ, ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಮುಂದಾಗಿದ್ದು ಇವರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಪಟ್ಟಣದ ಸುತ್ತಮುತ್ತ ಕೆರೆ-ಕಟ್ಟೆಗಳು, ಜಲಾಶಯವಿದ್ದು, ಇಲ್ಲಿಗೆ ಹಕ್ಕಿ ಪಕ್ಷಿಗಳು ಬರುವುದು ಸಹಜ. ಆದರೆ ಇಲ್ಲಿ ಯಾವುದೆ ಹಕ್ಕಿ ಪಕ್ಷಿಗಳು ಮೃತಪಟ್ಟಿರುವುದು ಕಂಡು ಬಂದರೆ ತಕ್ಷಣ ಪುರಸಭೆ ಅಧಿಕಾರಿಗಳಿಗಾಗಲಿ ಅಥವಾ ನಮಗಾಗಲಿ ತಿಳಿಸಿದರೆ ಅದನ್ನು ವಶಕ್ಕೆ ಪಡೆದು ಪರಿಶೀಲನೆಗೆ ಕಳುಹಿಸಲಾಗುವುದು. ಕೋಳಿ, ಕುರಿ, ಮೀನು ಮಾಂಸದಂಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡದೆ ನಿಗದಿತ ಸ್ಥಳದಲ್ಲಿ ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯ. ಆದ್ದರಿಂದ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಆರೋಗ್ಯಾಧಿಕಾರಿ ವೆಂಟೇಶ್ ಹಾಗೂ ಕೋಳಿ, ಕುರಿ, ಮೀನು ಮಾಂಸದಂಡಿಗಳ ಮಾಲೀಕರು, ಮಾರಾಟಗಾರರಿದ್ದರು.