ಜಿಲ್ಲೆ

ಹಣದ ವಿಚಾರಕ್ಕೆ ಪೀಡಿಸಿ ಹೆಣವಾದ: ಸೆರೆಗೆ ಬಿದ್ರು ಸ್ನೇಹಿತರು

reporterburban

ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ರಾಜಗೋಪಾಲನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಲಗ್ಗೆರೆ ನಿವಾಸಿಗಳಾದ ಮಹೇಶ್‌ಗೌಡ (26) ಕೊಲೆಯಾದವ. ಕೃತ್ಯ ಎಸಗಿದ ಲಗ್ಗೆರೆಯ ಕೃಷ್ಣ (38), ರಾಮದಾಸ (26), ಸಂತೋಷ್ (25), ಸುರೇಶ್ ಮತ್ತು ಗಣೇಶ್ (20) ಎಂಬುವರನ್ನು ಬಂಧಿಸಿರುವುದಾಗಿ ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

ಲಾಡ್ಜ್, ಬಾಡಿಗೆ ಮನೆಗಳನ್ನು ನಿರ್ವಹಣೆ ಮಾಡುತ್ತಿದ್ದ ಮಹೇಶ್, ತನ್ನದೆ ಸ್ನೇಹಿತರ ಜತೆ ಓಡಾಡಿಕೊಂಡು ಇದ್ದರು. ಆರೋಪಿ ಕೃಷ್ಣನಿಗೂ ಮನೆ ಬಾಡಿಗೆಯಿಂದ ಸಾಕಷ್ಟು ಹಣ ಬರುತ್ತಿತ್ತು. ಈ ಇಬ್ಬರು ಸ್ನೇಹಿತರಾಗಿದ್ದರು. ಹಣ ಇಲ್ಲದೆ ಇದ್ದಾಗ ಕೊಡುವುದು, ತೆಗೆದುಕೊಳ್ಳುವುದು ಮಾಡುತ್ತಿದ್ದರು. ಇದರ ನಡುವೆ ಮಹೇಶ್, ಪ್ರತಿದಿನ ಕರೆ ಮಾಡಿ ಕೃಷ್ಣನ ಬಳಿ ಪದೇ ಪದೆ ಹಣಕ್ಕೆ ಪೀಡಿಸುತ್ತಿದ್ದ. ಅಲ್ಲದೆ, ಹಣ ಕೊಡದೆ ಇದ್ದರೇ ಕೊಲೆ ಮಾಡುವುದಾಗಿ ಮಾನಸಿಕ ಹಿಂಸೆ ಕೊಡುತ್ತಿದ್ದ. ಇದೇ ದ್ವೇಷಕ್ಕೆ ಕೃಷ್ಣ, ತನ್ನ ಸಹಚರರ ಜತೆ ಸೇರಿ ಮಹೇಶನ ಹತ್ಯೆಗೆ ಸ್ಕೆಚ್ ರೂಪಿಸಿದ್ದ.

ಅ.21ರ ಸಂಜೆ 6.30ರಲ್ಲಿ ಕೃಷ್ಣ ಮತ್ತು ರಾಮದಾಸ ಕೊಲೆ ಮಾಡುವ ಉದ್ದೇಶಕ್ಕೆ ಮಹೇಶ್‌ನನ್ನು ಭೇಟಿ ಮಾಡಿ ನಮ್ಮ ನಡುವೆ ಯಾಕೆ ಜಗಳ, ಕುಳಿತು ರಾಜೀಸಂಧಾನ ಮಾಡಿಕೊಳ್ಳೋಣ ಎಂದು ಮನವೊಲಿಸಿ ಕಾರಿಗೆ ಕೂರಿಸಿಕೊಂಡಿದ್ದರು. ಹೆಸರುಘಟ್ಟದ ತಮ್ಮ ಜಮೀನಿಗೆ ಕರೆದೊಯ್ದ ಕೃಷ್ಣ, ಅಲ್ಲಿ ಮಹೇಶ್‌ಗೆ ಕಂಠಮಟ್ಟ ಮದ್ಯ ಕುಡಿಸಿ ಮಚ್ಚಿನಿಂದ ತಲೆಗೆ ಮತ್ತು ಕುತ್ತಿಗೆ ಹೊಡೆದು ಹತ್ಯೆ ಮಾಡಿದ್ದ. ಇದಾದ ಮೇಲೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಕೂಲಿಗಾರರಾದ ಗಣೇಶ್, ಸೂರಿ ಮತ್ತು ಸಂತೋಷ್ ಸಹಾಯದಿಂದ ಗುಂಡಿ ತೆಗೆದು ಶವ ಮುಚ್ಚಿದ್ದ.

ಇತ್ತ ಮಗ ಮನೆಗೆ ಬಾರದೆ ಇದ್ದಾಗ ಮಹೇಶ್ ತಂದೆ ದೇವೇಗೌಡ, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಅ.18ರಂದು ಹಣಕಾಸಿನ ವಿಚಾರಕ್ಕೆ ಮಹೇಶ್ ಮತ್ತು ಕೃಷ್ಣನ ನಡುವೆ ಜಗಳವಾಗಿತ್ತು. ಅ.21ರ ಮಧ್ಯಾಹ್ನ 2 ಗಂಟೆಯಲ್ಲಿ ಮಹೇಶ್, ತನ್ನ ಮೊಬೈಲ್‌ಗೆ ಕರೆ ಮಾಡಿ ಸ್ನೇಹಿತನ ಬಳಿ ಹಣ ಸ್ವೀಕರಿಸಲು ಹೋಗುತ್ತಿದ್ದೆನೆ. ಮಾರನೇ ದಿನ ಬರುತ್ತೆನೆ ಎಂದು ಹೇಳಿ ಹೋಗಿದ್ದು, ಇಲ್ಲಿಯವರೆಗೂ ಹಿಂತಿರುಗಿಲ್ಲ. ಮಗನ ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸಿದಾಗ ಕೃಷ್ಣನ ಜತೆ ಹೋಗಿರುವ ವಿಷಯ ಗೊತ್ತಾಯಿತು ಎಂದು ದೂರಿನಲ್ಲಿ ದೇವೇಗೌಡ ಉಲ್ಲೇಖಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಬಿ.ಐಯ್ಯಣ್ಣ ರೆಡ್ಡಿ ನೇತೃತ್ವದ ತಂಡ ಆರೋಪಿ ಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ.