ಜಿಲ್ಲೆ

ಕ್ಲಾಕ್‌ಟವರ್ - ಹ್ಯಾಮಿಲ್ಟನ್ ಸರ್ಕಲ್ ದ್ವಿಮುಖ ಸಂಚಾರ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಆಗ್ರಹ

ಮಂಗಳೂರು: ನಗರದ ಹಂಪನಕಟ್ಟೆಯ ಕ್ಲಾಕ್ ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್ ಸರ್ಕಲ್‌ವರೆಗೆ ಈಗ ಇರುವ ಏಕಮುಖ ಸಂಚಾರ ವ್ಯವಸ್ಥೆ ಬದಲಾಯಿಸಿ, ಈ ಹಿಂದೆ ಇದ್ದಂತೆಯೇ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.


ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯುಕ್ತ ಅನುಪಮ್ ಅಗ್ರವಾಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಜನಸಂಪರ್ಕ ಸಭೆಯಲ್ಲಿ ಮನಪಾ ಸದಸ್ಯ ಅಬ್ದುಲ್ ಲತೀಫ್, ಮಾಜಿ ಮೇಯರ್ ಅಶ್ರಫ್, ಮುನೀರ್ ಅಹಮ್ಮದ್ ಪಾಂಡೇಶ್ವರ, ಜಿ.ಕೆ.ಭಟ್ ಮೊದಲಾದವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಏಕಮುಖ ಸಂಚಾರದಿಂದ ಸುತ್ತು ಬಳಸಿ ಹೋಗಬೇಕಾಗಿದೆ. ಅಗ್ನಿಶಾಮಕ ವಾಹನಗಳಿಗೂ ತೊಂದರೆಯಾಗುತ್ತಿದೆ. ವಾಹನ ಚಾಲಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಏಕಮುಖ ಸಂಚಾರ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಯಾವುದೇ ಜನಪ್ರತಿನಿಧಿ, ಸ್ಥಳೀಯರ ಅಭಿಪ್ರಾಯವನ್ನು ಕೂಡ ಕೇಳದೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬ್ದುಲ್ ಲತೀಫ್ ಅಸಮಾಧಾನ ವ್ಯಕ್ತಪಡಿಸಿದರು.


ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಏಕಮುಖ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಿಂದ ಕೋಟ್ಯಂತರ ರೂ. ವ್ಯಯಿಸಲಾಗಿದೆ. ಹಾಗಾಗಿ ತಕ್ಷಣ ಬದಲಾವಣೆ ಕಷ್ಟ. ಈ ಬಗ್ಗೆ ಸಾರ್ವಜನಿಕರ ಮಾಹಿತಿ ಸಂಗ್ರಹಿಸಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.


ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಕಡ್ಡಾಯಗೊಳಿಸಬೇಕು ಎಂದು ವಿನೋದ್ ಸಾಲ್ಯಾನ್ ಆಗ್ರಹಿಸಿದರೆ, ಶಿಕ್ಷಣ ಸಂಸ್ಥೆಗಳು ಶಾಲಾ ಬಸ್‌ಗಳಿಗೆ ಬದಲಿಯಾಗಿ ಯಾವುದೋ ವಾಹನಗಳ ಚಾಲಕರನ್ನು ನಿಯೋಜಿಸುವ ಬದಲು ಖಾಯಂ ಆಗಿ ಅನುಭವಿ ಚಾಲಕರನ್ನೇ ನಿಯೋಜನೆ ಮಾಡಬೇಕು ಎಂದು ದಿನೇಶ್ ಕುಂಪಲ ಒತ್ತಾಯಿಸಿದರು.


ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಅಂಬೇಡ್ಕರ್(ಜ್ಯೋತಿ) ವೃತ್ತ ನಿರ್ಮಾಣಕ್ಕೆ ಆಗ್ರಹಿಸಲಾಗುತ್ತಿದ್ದರೂ ಕಾಮಗಾರಿ ಮಾತ್ರ ನಡೆದಿಲ್ಲ ಎಂದು ದಲಿತ ಮುಖಂಡ ಅನಿಲ್ ಕುಮಾರ್ ಕಂಕನಾಡಿ ಅಸಮಾಧಾನ ವ್ಯಕ್ತಪಡಿಸಿದರು. ವಿನ್ಯಾಸ ಅಂತಿಮಗೊಂಡಿದ್ದು, ನೀತಿಸಂಹಿತೆ ಮುಗಿದ ಕೂಡಲೇ ಕೆಲಸ ಆರಂಭಿಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಮಂಜು ಕೀರ್ತಿ ಪ್ರತಿಕ್ರಿಯಿಸಿದರು.


ಪಂಪ್‌ವೆಲ್‌ನಲ್ಲಿ ಉಳ್ಳಾಲ ಕಡೆಗೆ ಹೋಗುವ ಬಸ್ ನಿಲುಗಡೆಗೆ ನಿಲ್ದಾಣವಿಲ್ಲ. ರಸ್ತೆಯಲ್ಲೇ ಬಸ್, ಆಟೋರಿಕ್ಷಾಗಳು ನಿಲುಗಡೆಯಾಗುತ್ತಿವೆ ಎಂದು ಜಾನ್ ಮೊಂತೆರೋ ಹೇಳಿದರೆ, ಕೊಟ್ಟಾರಚೌಕಿಯಲ್ಲಿಯೂ ಬಸ್ ಶೆಲ್ಟರ್‌ನ ಸಮಸ್ಯೆ ಇದೆ ಎಂದು ಮುಹಮ್ಮದ್ ಅಲಿ ಗಮನ ಸೆಳೆದರು. ಮುಂದಿನ ತಿಂಗಳಿನೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ, ವಾಹನ ಸಂಚಾರ ನಿರ್ವಹಣೆಗೆ ಸಂಬಂಧಿಸಿ ಮಾನಿಟರಿಂಗ್ ಕಮಿಟಿ ರಚಿಸಬೇಕು ಎಂದು ಉಮಾನಾಥ್ ಕೋಟೆಕಾರ್ ಸಲಹೆ ನೀಡಿದರು.


ಹಂಪನಕಟ್ಟೆ ಕಡೆಯಿಂದ ಆಕಾಶಭವನಕ್ಕೆ ರಾತ್ರಿ 7 ಗಂಟೆಯ ಅನಂತರ ಯಾವುದೇ ಬಸ್ ಸಂಚರಿಸದೆ ಉದ್ಯೋಗದಿಂದ ಮನೆಗೆ ಹೋಗುವ ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಹಿರಿಯ ನಾಗರಿಕರಾದ ಸುಧಾಮಣಿ ಅಹವಾಲು ತೋಡಿಕೊಂಡರು.
ನಗರ ರಾಜಕಾಲುವೆ, ತೋಡುಗಳನ್ನು ಸ್ವಚ್ಛ ಮಾಡಿ ಮಣ್ಣನ್ನು ಅದರ ಪಕ್ಕದಲ್ಲಿಯೇ ಹಾಕಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಮನಪಾ ಮಾಜಿ ಸದಸ್ಯ ನಾಗೇಂದ್ರ ಕುಮಾರ್ ಹೇಳಿದರು.


ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಹಲವೆಡೆ ರಾತ್ರಿ ಮಂಗಳಮುಖಿಯರಿಂದ ಅಸಭ್ಯ, ಅಶ್ಲೀಲ ವರ್ತನೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ಮುಜುಗರವಾಗುತ್ತಿದೆ ಎಂದು ದಿನೇಶ್ ಕುಂಪಲ ದೂರಿದರು. ಮಂಗಳಮುಖಿಯರಿಗೆ ಪರ್ಯಾಯ ಉದ್ಯೋಗಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವುದಾಗಿ ಪೊಲೀಸ್ ಆಯುಕ್ತರು ಹೇಳಿದರು.


ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ಧಾಥ್ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ ಉಪಸ್ಥಿತರಿದ್ದರು. ಎಸಿಪಿ ಧನ್ಯಾ ನಾಯಕ್ ಸ್ವಾಗತಿಸಿದರು. ಸಿಸಿಬಿ ಎಸಿಪಿ ಗೀತಾ ಕುಲಕರ್ಣಿ ವಂದಿಸಿದರು.