ಅವಿನಾಶ್ ಜೈನಹಳ್ಳಿ ಮೈಸೂರು
ರಾಷ್ಟ್ರಕವಿ ಕುವೆಂಪು ಸೇರಿದಂತೆ ನಾಡಿನ ಹೆಸರಾಂತ ಕವಿಗಳ ಸ್ಫೂರ್ತಿಯ ತಾಣ ಕುಕ್ಕರಹಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹೋಗದ ಪರಿಣಾಮ ಏರಿ ಶಿಥಿಲಾವಸ್ಥೆ ತಲುಪುವ ಅಪಾಯದಲ್ಲಿದೆ. ಮೈಸೂರು ವಿಶ್ವವಿದ್ಯಾಲಯ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷೃ ಇಲ್ಲಿ ಎದ್ದು ಕಾಣುತ್ತಿದ್ದು, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಇದೀಗ ಕೆರೆಯ ನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ.
ಈ ವರ್ಷ ಉತ್ತಮ ಮಳೆಯಾಗಿದ್ದು, ವಾರದಿಂದ ಬಿಟ್ಟೂ ಬಿಡದೆ ಸುರಿದ ಭಾರಿ ಮಳೆಯಿಂದಾಗಿ ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿರುವ ಕುಕ್ಕರಹಳ್ಳಿ ಕೆರೆ ಭರ್ತಿಯಾಗಿದೆ. ಸುತ್ತಮುತ್ತಲ ಭಾಗಗಳಿಂದ ಮಳೆ ನೀರು ನಿರಂತರವಾಗಿ ಹರಿದು ಬರುತ್ತಿರುವುದರಿಂದ ಕೆರೆಯ ಉತ್ತರ ಭಾಗದ ಏರಿ (ಮೈಸೂರು-ಹುಣಸೂರು ಹೆದ್ದಾರಿ ಬಳಿ) ಮಟ್ಟಕ್ಕೆ ನೀರು ಏರಿಕೆಯಾಗಿದ್ದು, ಅಲ್ಲಲ್ಲಿ ಕುಸಿದಿದೆ. ಜತೆಗೆ, ಏರಿಕೆಯ ಇಕ್ಕೆಲದಲ್ಲಿದ್ದ ಬೃಹತ್ ಮರಗಳು ಧರೆಗುರುಳಿ ಮತ್ತಷ್ಟು ಶಿಥಿಲಾವಸ್ಥೆಗೆ ತಲುಪಿದೆ. ಕೆರೆ ಭರ್ತಿಯಾಗಿದ್ದರಿಂದ, ಕೆರೆ ಏರಿಯ ಮತ್ತೊಂದು ಭಾಗದಲ್ಲಿ ಶೇಖರಣೆಯಾಗಿದ್ದ ಪಡುವರಹಳ್ಳಿಯಿಂದ ಬಂದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದು ಒಂದೆಡೆಯಾದರೆ, ಏರಿಯ ಮೇಲೆ ನಿರ್ಮಿಸಿರುವ ಯುಜಿಡಿ ಲೈನ್ ಕುಸಿದು ತ್ಯಾಜ್ಯವೆಲ್ಲ ಕೆರೆ ಸೇರುತ್ತಿದೆ.
ಇನ್ನು ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಕಟ್ಟಡದವರೆಗೂ ಕೆರೆ ನೀರು ಬಂದಿದೆ. ಸದರಿ ಕಟ್ಟಡದ ಸುತ್ತಮುತ್ತ ನೀರು ಸಂಗ್ರಹವಾದ ಕಾರಣ ಕೆಲ ದಿನಗಳಿಂದ ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಇನ್ನೊಂದು ಭಾಗದಲ್ಲಿ ಕೆರೆಯ ನೀರು ರಂಗಾಯಣ ವನರಂಗದ ಸಮೀಪ ಹೋಗುತ್ತಿದ್ದು, ಎರಡು ದಿನ ಜೋರು ಮಳೆಯಾದರೆ ರಂಗಾಯಣದ ಅಂಗಳಕ್ಕೂ ಕಾಲಿಡಲಿದೆ.
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ:
ಕುಕ್ಕರಹಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹೋಗದ ಪರಿಣಾಮ ಕೆರೆಯ ಏರಿ ಶಿಥಿಲಾವಸ್ಥೆಗೆ ತಲುಪುವ ಅಪಾಯದಲ್ಲಿದೆ. ಸದ್ಯ ಕೆರೆಯ ರೈಲ್ವೆ ಹಳಿ ಕಡೆಗೆ ಇರುವ ನೀರಿನ ಗೇಟ್ ಮೂಲಕ ಸ್ವಲ್ಪ ಪ್ರಮಾಣದ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸದರಿ ಗೇಟ್ ಕೂಡ ಶಿಥಿಲಗೊಂಡಿತ್ತು.
ಉತ್ತಮ ಮಳೆಯಾಗಿ ಕೆರೆ ಭಾಗಶಃ ತುಂಬಿದಾಗಲೇ ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ನೀರು ಹೊರಹೋಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಈ ಕಾರ್ಯ ಮಾಡದೆ ನಿರ್ಲಕ್ಷಿಸಿದ್ದರಿಂದ ಏರಿಯ ಮೇಲೆ ಒತ್ತಡ ಹೆಚ್ಚಿದೆ. ಪರಿಣಾಮ, ಅಲ್ಲಲ್ಲಿ ನೀರು ಸೋರಿಕೆಯಾಗಿ ಕೆರೆಯ ಪಕ್ಕದ ರಸ್ತೆಯಲ್ಲಿ ಹರಿಯುತ್ತಿದೆ.
ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾದ ಬಳಿಕ ಎಚ್ಚೆತ್ತುಕೊಂಡ ಮೈಸೂರು ವಿವಿ ಮತ್ತು ಪಾಲಿಕೆ ಅಧಿಕಾರಿಗಳು, ಜಂಟಿಯಾಗಿ ಕಳೆದೆರಡು ದಿನಗಳಿಂದ ಮೋಟಾರ್ ಅಳವಡಿಸಿ ಹೆಚ್ಚುವರಿ ನೀರನ್ನು ಹೊರಹಾಕುವ ಕೆಲಸ ನಡೆಸಿದ್ದಾರೆ.
ಪುಷ್ಕರಣಿಗೆ ಆವರಿಸಿದ ನೀರು
ಕೆರೆಯಿಂದ ಹೊರ ಬರುತ್ತಿರುವ ನೀರು, ಕೆರೆಯ ಕೆಳ ಭಾಗದಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಗಿಡಮೂಲಿಕೆಗಳ ತೋಟ ಹಾಗೂ ಪುಷ್ಕರಣಿಯನ್ನು ಆವರಿಸಿಕೊಂಡಿದೆ.
ಈಜುಕೊಳದ ಪಕ್ಕದಲ್ಲಿರುವ ಪುಷ್ಕರಣಿ ಮೂಲಕ ದೊಡ್ಡ ಮೋರಿಯಲ್ಲಿ ಹರಿಸುತ್ತಿದ್ದಾರೆ. ಹೀಗಾಗಿ, ತೋಟ, ಪುಷ್ಕರಣಿಯೂ ಗಬ್ಬು ನಾರುತ್ತಿದೆ. ಜತೆಗೆ, ಈಜುಕೊಳ ಮತ್ತು ಸಮೀಪದ ಶನೈಶ್ಚರ ದೇಗುಲಕ್ಕೆ ಬರುವ ಭಕ್ತರ ಆರೋಗ್ಯದ ಮೇಲೂ ಕೆಟ್ಟ ಪ್ರಭಾವ ಬೀರುತ್ತಿದೆ.
ಕೆರೆಯ ತೂಬಿನ ವಾಲ್ವ್ ರಿಪೇರಿ
150 ವರ್ಷಗಳ ಹಿಂದೆ ಮಹಾರಾಜರು ಕಟ್ಟಿಸಿದ ಕುಕ್ಕರಹಳ್ಳಿ ಕೆರೆ, ಗುಡಿ ಕೈಗಾರಿಕೆ ಮತ್ತು ಕೃಷಿಗೆ ಉಪಯೋಗವಾಗುವ ದೃಷ್ಟಿಯಿಂದ ತೂಬು ನಿರ್ಮಿಸಿ ವಾಲ್ವ್ ಅಳವಡಿಸಿದ್ದರು. ಕೆರೆಯ ನೀರು ಬಳಕೆಗೆ ತೂಬು ಅನುಕೂಲವಾಗಿತ್ತು. ಬಳಿಕ ಕೆರೆ ಭರ್ತಿಯಾಗದ ಹಿನ್ನೆಲೆಯಲ್ಲಿ ಹಾಗೂ ಕೆರೆಯ ನೀರಿನ ಅವಲಂಬನೆ ಕಡಿಮೆಯಾಗುತ್ತಿದ್ದಂತೆ ತೂಬಿನ ವಾಲ್ವ್ ಕೆಟ್ಟು ನಿಂತಿತ್ತು. ಆದರೀಗ ಕೆರೆ ಸಂಪೂರ್ಣವಾಗಿ ತುಂಬಿರುವುದರಿಂದ ಹೆಚ್ಚುವರಿ ನೀರನ್ನು ಹೊರಹಾಕಲು ತೂಬಿನ ಗೇಟ್ ಬಳಕೆ ಮಾಡುವುದು ಅನಿವಾರ್ಯವಾಗಿದ್ದರಿಂದ ಪಾಲಿಕೆ, ಮುಡಾ, ಕೆಆರ್‌ಎಸ್ ಇಂಜಿನಿಯರ್‌ಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ರಿಪೇರಿ ಮಾಡಿದ್ದು, ಬುಧವಾರ ಸಂಜೆಯಿಂದ ನೀರನ್ನು ಹೊರಬಿಡಲಾಗುತ್ತಿದೆ.
ಮತ್ತೆ ಜಲಚರಗಳಿಗೆ ಆಪತ್ತು?:
ಕೆರೆಯ ಉತ್ತರ ದಿಕ್ಕಿನಲ್ಲಿ ಶೇಖರಣೆಯಾಗಿದ್ದ ಕಲುಷಿತ ನೀರು, ಏರಿ ಕುಸಿತದಿಂದ ಕೆರೆಗೆ ಸೇರುತ್ತಿದೆ. ಜತೆಗೆ, ಏರಿಯ ಮೇಲೆ ನಿರ್ಮಿಸಿದ್ದ ಯುಜಿಡಿ ಲೈನ್ ಕೂಡ ಕುಸಿದಿರುವುದರಿಂದ ತ್ಯಾಜ್ಯ ಕೆರೆಗೆ ನೇರವಾಗಿ ಸೇರುತ್ತಿರುವುದರಿಂದ ಕೆರೆಯಲ್ಲಿರುವ ಜಲಚರಗಳಿಗೆ ಮಾರಕವಾಗುವ ಅಪಾಯವಿದೆ.
ಈ ಹಿಂದೆ ಕುಕ್ಕರಹಳ್ಳಿ ಕೆರೆಗೆ ಕಲುಷಿತ ನೀರು ಸೇರ್ಪಡೆಗೊಂಡು ಸಾವಿರಾರು ಮೀನುಗಳು ಮೃತಪಟ್ಟಿದ್ದವು. ನಂತರ ಕಲುಷಿತ ನೀರು ಕೆರೆಗೆ ಸೇರುವುದನ್ನು ತಡೆದಿದ್ದರಿಂದ ಮೀನುಗಳು ಸುರಕ್ಷಿತವಾಗಿ ಇದ್ದವು. ಕೆರೆ ಸಮೀಪ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆಯಲಾಗಿತ್ತು.
102 ಎಕರೆ ಕೆರೆ:
1881ರಲ್ಲಿ ಮೈಸೂರು ಮಹಾರಾಜರು 102 ಎಕರೆ ಜಾಗದಲ್ಲಿ ಈ ಕೆರೆಯನ್ನು ಕಟ್ಟಿಸಿದರು. ವಿಶ್ವಪ್ರಸಿದ್ಧ ಮೈಸೂರು ಸುಗಂಧದೆಣ್ಣೆ ಕಾರ್ಖಾನೆಗೆ ಇಲ್ಲಿಂದಲೇ ನೀರು ಸರಬರಾಜು ಆಗುತ್ತಿತ್ತು. ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಜನ, ಜಾನುವಾರುಗಳಿಗೂ ಈ ಕೆರೆ ನೀರು ಜೀವದಾಯಿನಿಯಾಗಿತ್ತು ಹಾಗೂ ಅಂತರ್ಜಲದ ಶಕ್ತಿಯನ್ನೂ ಹೆಚ್ಚಿಸಿತ್ತು.
ಈ ವರ್ಷ ಕುಕ್ಕರಹಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆರೆ ತೂಬಿನಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ.ಪ್ರತಾಪ್, ಮೈಸೂರು ವಿವಿಯ ಇಂಜಿನಿಯರ್ಕರೆ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಜತೆಗೆ, ತಾತ್ಕಾಲಿಕವಾಗಿ ಕೆರೆಗೆ ಹೊರ ಭಾಗದಿಂದ ನೀರು ಬರದಂತೆ ನೋಡಿಕೊಳ್ಳಲಾಗುವುದು.ಲಕ್ಷ್ಮೀಕಾಂತ ರೆಡ್ಡಿ, ಪಾಲಿಕೆ ಆಯುಕ್ತ