ವಿರಾಜಪೇಟೆ: ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಶನಿವಾರ ವರ್ತಕರು ಮಾಲು ಸಮೇತ ಹಿಡಿದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರ (ತೋರ) ಗ್ರಾಮದ ನಿವಾಸಿ ಸುರೇಶ್ (51) ಸಿಕ್ಕಿಬಿದ್ದ ಕಳ್ಳ.
ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿರುತ್ತಿದ್ದ ಮಳಿಗೆ ಮಾಲೀಕರ ತರಕಾರಿ ಚೀಲಗಳು ಏಕಾಏಕಿ ಮಾಯವಾಗುತ್ತಿತ್ತು. ಅಂತೆಯೇ 15 ದಿನಗಳ ಹಿಂದೆ 50 ಕೆ.ಜಿ. ತೂಕದ ಬೀಟ್ರೋಟ್ ಚೀಲ, ತಿಂಗಳ ಹಿಂದೆ 20 ಕೆ.ಜಿ.ತೂಕದ ಬೀನ್ಸ್ ಚೀಲ, 10 ದಿನಗಳ ಹಿಂದೆ 10 ಕೆ.ಜಿ. ತೂಕದ ಹಾಗಲಕಾಯಿ ಚೀಲ ಕಳ್ಳತನವಾಗಿತ್ತು. ನಿರಂತರ ಕಳ್ಳತನದಿಂದ ಮಾರುಕಟ್ಟೆಯ ವರ್ತಕರು ಕಂಗಾಲಾಗಿದ್ದರು.
ತರಕಾರಿ ಮಾರುಕಟ್ಟೆಯ ಒಂದು ಅಂಚಿನಲ್ಲಿ ಒಣ ಮೀನು ಮಾರುಕಟ್ಟೆಯಿದ್ದು, ಚಾಲಾಕಿ ಕಳ್ಳ ಬುಧವಾರ ಸಂತೆಗೆ ಬಂದು ಮೀನು ಕಳ್ಳತನ ಮಾಡಲು ಹೊಂಚು ಹಾಕಿದ್ದಾನೆ. ಶನಿವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಪ್ಲಾಸ್ಟಿಕ್ ಚೀಲವೊಂದಕ್ಕೆ ತೆರಂಡಿ ಮೀನುಗಳನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಮುಂಜಾನೆ ಮಸೀದಿಗೆ ತೆರಳುವ ವ್ಯಕ್ತಿಯೊಬ್ಬರು ಮಾರುಕಟ್ಟೆಯಿಂದ ಅನಾಮಧೇಯ ವ್ಯಕ್ತಿ ಸಂಶಯಾಸ್ಪದವಾಗಿ ತೆರಳುತ್ತಿರುವುದನ್ನು ನೋಡಿ ಸ್ನೇಹಿತರಿಗೆ ತಿಳಿಸಿದ್ದಾರೆ. ಆ ಬಳಿಕ ಆತನನ್ನು ಹಿಂಬಾಲಿಸಿ ಮೂರ್ನಾಡು ರಸ್ತೆಯ ತಿರುವಿನಲ್ಲಿ ಮಾಲು ಸಮೇತ ಹಿಡಿದಿದ್ದಾರೆ. ನಂತರ ಆತನನ್ನು ಮಾರುಕಟ್ಟೆಗೆ ಕರೆ ತಂದು ವಿಚಾರಣೆ ಮಾಡಿದಾಗ, ಸಮೀರ್ ಅವರಿಗೆ ಸೇರಿದ ಒಣ ಮೀನು ಮಳಿಗೆಯಿಂದ ತೆರಂಡಿ ಮೀನು ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.
ತೆರಂಡಿ ಮೀನು ಒಂದು ಕೆ.ಜಿ.ಗೆ 450 ರೂ. ಇದ್ದು, ಸುಮಾರು 10 ಕೆ.ಜಿ. ಮೀನು ಕಳ್ಳತನ ಮಾಡಿದ್ದ ಎನ್ನಲಾಗಿದೆ. ಬಳಿಕ ವರ್ತಕರು ಮಾನವೀಯತೆ ದೃಷ್ಟಿಯಿಂದ ಪೊಲೀಸರಿಗೆ ದೂರು ನೀಡದೆ ಕಳ್ಳನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.