ಜಿಲ್ಲೆ

ಸ್ವಚ್ಛತೆ ಅರಿವು ಮೂಡಿಸಿದ್ದ ಗಾಂಧೀಜಿ

ಗುಂಡ್ಲುಪೇಟೆ: ಪಟ್ಟಣವನ್ನು ಪ್ಲಾಸ್ಟಿಕ್‌ಮುಕ್ತವಾಗಿಸಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.


ಪಟ್ಟಣದ ನೆಹರು ವೃತ್ತದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧಿ ಅವರು ಸ್ವಚ್ಛತೆ ಅಭಿಯಾನ ನಡೆಸುವ ಮೂಲಕ ದೇಶದಲ್ಲಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ದಿನೇ ದಿನೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ಸ್ವಚ್ಛತೆ ನಿರ್ವಹಣೆ ಸವಾಲಾಗುತ್ತಿದೆ. ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸಿ ಅಲ್ಲಲ್ಲಿ ಅಳವಡಿಸಿರುವ ಕಸದ ತೊಟ್ಟಿಗಳಿಗೆ ಹಾಕುವುದರಿಂದ ಪಟ್ಟಣದ ಸ್ವಚ್ಛತೆಗೆ ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿಯುಂಟಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಜತೆಗೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಪಟ್ಟಣದ ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.


ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾಕೌಸರ್, ಮುಖ್ಯಾಧಿಕಾರಿ ವಸಂತಾ ಕುಮಾರಿ, ಸದಸ್ಯರಾದ ಮಧು, ಕುಮಾರ್, ಕಪ್ಪಣ್ಣ, ಅಲ್ಲಾಹು ಇದ್ದರು.