ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರಚಿಕಿತ್ಸೆ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರವು ‘ಸೀಳು ಆರೈಕೆ ಮಾರ್ಗದರ್ಶನ ಕಾರ್ಯಕ್ರಮ’ಕ್ಕೆ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಜನ್ಮಜಾತ ವೈಪರೀತ್ಯಗಳಲ್ಲಿ ಸೀಳು ತುಟಿ ಮತ್ತು ಸೀಳು ಅಂಗುಳಿನ ಸಮಸ್ಯೆ ಸೇರಿವೆ. ಪೀಡಿತರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಪುನರ್ವಸತಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾಗಿ ತರಬೇತಿ ಪಡೆದ ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕರ ಕೊರತೆ ಇದೆ. ಪ್ರಸ್ತುತ ಸೀಳು ತುಟಿ ಮತ್ತು ಸೀಳು ಅಂಗುಳಿನ ಪ್ರಕರಣಗಳನ್ನು ಗುರುತಿಸುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಅಥವಾ ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ (ಡಿಇಐಸಿ) ದಿಂದ ಲಾನುಭವಿಗಳನ್ನು ಶಸ್ತ್ರಚಿಕಿತ್ಸೆಗಳಿಗಾಗಿ ನೋಂದಾಯಿತ ಖಾಸಗಿ ಆರೋಗ್ಯ ಸೌಲಭ್ಯಗಳು ಮತ್ತು ಎನ್‌ಜಿಒಗಳಿಗೆ ಶಿಾರಸು ಮಾಡಲಾಗುತ್ತಿದೆ. ಇದಲ್ಲದೆ, ಕಳೆದ ಐದು ವರ್ಷಗಳಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು, ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಎರಡು ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಕೇವಲ 20 ಕಾರ್ಯವಿಧಾನಗಳನ್ನು ನಡೆಸಿವೆ. ಹಾಗಾಗಿ ಈ ಚಿಕಿತ್ಸೆಯನ್ನು ಸಮಪರ್ಕವಾಗಿ ಒದಗಿಸುವ ನಿಟ್ಟಿನಲ್ಲಿ ಜುಲೈ 28 ರಂದು ಸರ್ಕಾರ ಆದೇಶ ಹೊರಡಿಸಿದ್ದು, ರಾಜ್ಯದ ಆರೋಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಸರ್ಕಾರಿ ಆಸ್ಪತ್ರೆಗಳ ವಿಶ್ಲೇಷಣೆ ಮಾಡಿ, ಅಗತ್ಯವಿರುವ ಮೂಲಸೌಕರ್ಯಗಳನ್ನು ಗುರುತಿಸಿ, ಶಸ್ತ್ರಚಿಕಿತ್ಸೆ ನಡೆಸಲು ಉಪಕರಣಗಳು ಅಥವಾ ಮಾನವ ಸಂಪನ್ಮೂಲ ಒದಗಿಸುವಂತೆ ಸೂಚಿಸಿದೆ.