ಸಿದ್ದಾಪುರ ಸಂತೆ ಮಾರುಕಟ್ಟೆಯಲ್ಲಿ ಶೇಖರಿಸಲಾಗಿದ್ದ ತ್ಯಾಜ್ಯವನ್ನು ಜೆಸಿಬಿ ಮೂಲಕ ತೆರವು ಮಾಡುತ್ತಿರುವುದು. 
ಜಿಲ್ಲೆ

ಮಾರುಕಟ್ಟೆಯಲ್ಲಿ ಸಂಗ್ರಹವಾಗುತ್ತಿದ್ದ ತ್ಯಾಜ್ಯ ತೆರವು

ಸಿದ್ದಾಪುರ: ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಶೇಖರಿಸಲಾಗುತ್ತಿದ್ದ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಜನ ವಸತಿ ಪ್ರದೇಶದ ಮಧ್ಯೆ ತ್ಯಾಜ್ಯ ಶೇಖರಿಸಲಾಗುತ್ತಿತ್ತು, ಸುಮಾರು 20 ವರ್ಷದಿಂದ ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಹಿಂದೆ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭಾಗವಹಿಸಿದ್ದ ಸಂದರ್ಭ, ಗ್ರಾಮಸ್ಥರು ಸಮಸ್ಯೆ ಬಗ್ಗೆ ಶಾಸಕರ ಗಮನ ಸೆಳೆದು ಸ್ಥಳವನ್ನು ಪರಿಶೀಲಿಸಲಾಗಿತ್ತು. 20ದಿನಗಳೊಳಗೆ ಸಮಸ್ಯೆಗೆ ಮುಕ್ತಿ ನೀಡುವುದಾಗಿ ಶಾಸಕರೂ ಭರವಸೆ ನೀಡಿದ್ದರು. ವಿಲೇವಾರಿಗೆ ಸಮಸ್ಯೆ ಎದುರಾದ್ದರಿಂದ ಶಾಸಕರೇ ಮುತುರ್ವಜಿ ವಹಿಸಿ ಮೈಸೂರಿನ ತ್ಯಾಜ್ಯ ಮರುಬಳಕೆಯ ಖಾಸಗಿ ಕಂಪನಿ ಜತೆ ಮಾತುಕತೆ ನಡೆಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

ಸೋಮವಾರ ಸಿದ್ದಾಪುರ ಗ್ರಾಮ ಪಂಚಾಯಿತಿ ಜೆಸಿಬಿ ಯಂತ್ರ ಬಳಸಿ ಕಸ ತೆರವುಗೊಳಿಸಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ, ಉಪಾಧ್ಯಕ್ಷ ಪಳನಿಸ್ವಾಮಿ, ಸದಸ್ಯ ಸೈನೂಲ್ಲ, ಜಾಫರ್, ಹಸನ್, ಅಬೀತಾ, ಸ್ಥಳೀಯರಾದ ಅಬೀದ್, ಜೂನೀಸ್, ಪ್ರಶಾಂತ್, ಪ್ರವೀಣ್ ಇತರರು ಇದ್ದರು.