ಯಲ್ಲಾಪುರ: ತಾಲೂಕಿನ ಮಾಗೋಡ ಕ್ರಾಸ್ನಿಂದ ಕೊಡ್ಲಗದ್ದೆ ಕ್ರಾಸ್ವರೆಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕ ವ್ಯಾಪಕ ಗಿಡಗಂಟಿ ತುಂಬಿದ್ದು, ಅದನ್ನು ತೆರವುಗೊಳಿಸುವ ಕಾರ್ಯವನ್ನು ಹೆದ್ದಾರಿ ಇಲಾಖೆ ಆರಂಭಿಸಿದೆ.
ಹೆದ್ದಾರಿ ಪಕ್ಕದ ಗಿಡಗಂಟಿಗಳು ಬೆಳೆದು, ರಸ್ತೆಯನ್ನು ಆವರಿಸಿದ್ದು, ಇದರಿಂದ ವಾಹನ ಸವಾರರಿಗೆ ಅಪಾಯ ಹಾಗೂ ಕಿರಿಕಿರಿ ಉಂಟಾಗುತ್ತಿತ್ತು. 2-3 ವರ್ಷಗಳಿಂದ ಗಿಡಗಂಟಿ ಕತ್ತರಿಸದೆ ಇರುವುದರಿಂದ ವಾಹನ ಸವಾರರಿಗೆ ಉಂಟಾಗುವ ಅಪಾಯಗಳ ಕುರಿತು ಅಂತೂ ಹೆದ್ದಾರಿ ಇಲಾಖೆ ಗಮನ ಹರಿಸಿದೆ.
ಹೆದ್ದಾರಿ ಇಲಾಖೆಯ ಮೇಲ್ವಿಚಾರಕ ಮುರುಗೇಶ ಶೆಟ್ಟಿ ಅವರ ನೇತೃತ್ವದಲ್ಲಿ ಹೆದ್ದಾರಿ ಪಕ್ಕ ಗಿಡಗಂಟಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಮೊದಲಿಗೆ ಮುಚ್ಚಿಹೋದ ನಾಮಫಲಕ, ಮುರಿದು ಬಿದ್ದ ಮರದ ಟೊಂಗೆ, ತೆರವುಗೊಳಿಸಲಾಗುತ್ತಿದ್ದು, ನಂತರ ಗಿಡಗಂಟಿ ಪೂರ್ತಿಯಾಗಿ ಸ್ವಚ್ಛ ಮಾಡಲಾಗುವುದು. ಗಿಡಗಂಟಿಗಳು ಹೆದ್ದಾರಿಯತ್ತ ಬಾಗಿದ್ದು, ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳ ಸೂಚನೆ ದೊರೆಯದೇ ವಾಹನ ಸವಾರರು ಆತಂಕದಲ್ಲಿ ಸಾಗಬೇಕಿತ್ತು. ಇದೀಗ ಗಿಡಗಂಟಿ ತೆರವಿನ ಮೂಲಕ ವಾಹನ ಸವಾರರ ಸುರಕ್ಷತೆಯ ಬಗ್ಗೆ ಇಲಾಖೆ ಕಾಳಜಿ ತೋರಿದೆ.