ಶನಿವಾರಸಂತೆ: ಶನಿವಾರಸಂತೆ ಅರಣ್ಯ ವಲಯ ವಿಭಾಗದ ಮಾಲಂಬಿ ಮೀಸಲು ಅರಣ್ಯದಲ್ಲಿ ಒತ್ತುವರಿಯಾಗಿದ್ದ ಸುಮಾರು 20 ಎಕರೆ ಜಾಗವನ್ನು ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದ್ದಾರೆ.
ಕಂತೆಬಸವನಳ್ಳಿ ಗ್ರಾಮದ ಅಪ್ಪಯ್ಯ ಎಂಬುವರು ತಮ್ಮ ಜಮೀನಿನ ಪಕ್ಕದ ಮೀಸಲು ಅರಣ್ಯ ಜಾಗದಲ್ಲಿ ಸುಮಾರು 20 ಎಕರೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದರು. ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿ ಕಾಫಿ, ಸಿಲ್ವರ್, ಹಾನವಾಲ ಮುಂತಾದ ಗಿಡಗಳನ್ನು ಬೆಳೆದು ಹಲವಾರು ವರ್ಷಗಳಿಂದ ಆದಾಯ ಗಳಿಸುತ್ತಿದ್ದರು.
ಮೀಸಲು ಅರಣ್ಯವನ್ನು ಅಕ್ರಮಿಸಿಕೊಂಡ ಬಳಿಕ ಆ ಜಾಗವನ್ನು ಪಹಣಿ ಪತ್ರಕ್ಕೆ ವರ್ಗಾಯಿಸಲು ಕಂದಾಯ ಇಲಾಖೆಗೆ ಇತ್ತೀಚೆಗೆ ಅರ್ಜಿ ಸಲ್ಲಿದ್ದರು. ಈ ಬಗ್ಗೆ ಅನುಮಾನಗೊಂಡ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿದಾಗ ಮೀಸಲು ಅರಣ್ಯಕ್ಕೆ ಸೇರಿದ ಜಾಗ ಎಂದು ಗಮನಕ್ಕೆ ಬಂದಿದೆ. ಹಾಗಾಗಿ ಶನಿವಾರಸಂತೆ ವಲಯ ಆರ್‌ಎಫ್‌ಒ ಕೊಟ್ರೇಶ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ರಮಿತ ಜಾಗವನ್ನು ತೆರವುಗೊಳಿಸಿದರು.