- ದೇವನಹಳ್ಳಿಯ ತಾಲೂಕು ಆಡಳಿತ ಸೌಧದ ಮುಂದೆ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿರುವುದು. ತಹಸೀಲ್ದಾರ್ ಉಷಾ, ಆರ್‌ಐ ಸಂತೋಷ್, ಪುರಸಭಾ ಮುಖ್ಯಾಧಿಕಾರಿ ಸಿ.ದೊಡ್ಡಮಲವಯ್ಯ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಇದ್ದರು. 
ಜಿಲ್ಲೆ

ದೇವನಹಳ್ಳಿಯಲ್ಲಿ ಅನಧಿಕೃತ ಅಂಗಡಿಗಳ ತೆರವು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಹಲವು ವರ್ಷಗಳಿಂದ ಇಟ್ಟಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತಾಲೂಕು ಆಡಳಿತ ತೆರವುಗೊಳಿಸಿತು. ಗುರುವಾರ ಮೊದಲ ಹಂತದ ಕಾರ್ಯಚರಣೆ ಆರಂಭಿಸಿದ್ದ ಅಧಿಕಾರಿಗಳು ಶನಿವಾರ ಎಲ್ಲ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ಪೂರ್ಣಗೊಳಿಸಿತು.

ತಾಲೂಕು ಆಡಳಿತ ಸೌಧದ ಸುತ್ತಮುತ್ತ ಸರ್ಕಾರಿ ಕಚೇರಿ ಕಟ್ಟಡಗಳು ಕಾಣದಂತೆ ಗೂಡಂಗಡಿ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಂಡು ಅದನ್ನು ಕೆಲವರು ಒಳಬಾಡಿಗೆಗೆ ನೀಡಿರುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ್ದರಿಂದ ಲೋಕಾಯುಕ್ತರು ದೂರು ಪರಿಶೀಲಿಸಿ ಕೆಲ ತಿಂಗಳ ಹಿಂದೆ ಸ್ಥಳ ಮಹಜರು ನಡೆಸಿ ರಸ್ತೆ ಬದಿಯ ಸರ್ಕಾರಿ ಕಟ್ಟಡಗಳ ಮುಂದಿನ ಗೂಂಡಗಡಿಗಳನ್ನು ಕೂಡಲೆ ತೆರುವುಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಆದೇಶಿದ್ದರು. ಆದೇಶ ನೀಡಿ ತಿಂಗಳಾದರೂ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸದೇ ಇದ್ದದರಿಂದ ಮತ್ತೆ ಲೋಕಾಯುಕ್ತರು ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದರಿಂದ ತಹಸೀಲ್ದಾರ್ ಮತ್ತು ಪುರಸಭಾ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.

ಡಿಸಿ ಆದೇಶದಂತೆ ತೆರವು:

ಮಿನಿ ವಿಧಾನಸೌಧದ ಮುಂದೆ ಸರ್ಕಾರಿ ಜಾಗದಲ್ಲಿ ಅನಧಿಕೃತ ಪಟ್ಟಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಕಾರ್ಯಾಚರಣೆ ನಡೆಯಲಾಯಿತು ಎಂದು ತಹಸೀಲ್ದಾರ್ ಉಷಾ ತಿಳಿಸಿದರು.

ಗುರುವಾರ ತೆರವು ಕಾರ್ಯ ಆರಂಭಿಸಿದಾಗ ಅಂಗಡಿ ಇಟ್ಟುಕೊಂಡಿದ್ದ ಕೆಲವು ವಿಕಲಚೇತನರು ವಿನಾಯತಿ ಕೊಡಿ ಎಂದಾಗ ಅಂತಹವರಿಗೆ ವಿನಾಯತಿ ಕೊಡುವ ಬಗ್ಗೆ ಡಿಸಿ ದೂರವಾಣಿ ಮೂಲಕ ಒಲವು ವ್ಯಕ್ತಪಡಿಸಿದ್ದರು. ಆದರೆ ಅದನ್ನೆ ಇನ್ನಿತರರು ದುರುಪಯೋಗಪಡಿಸಿಕೊಂಡು ನಮ್ಮದು ವಿಕಲಚೇತನರ ಪೆಟ್ಟಿಗಳು ಎಂಬ ವಾದ ಮಂಡಿಸಿದ್ದರು ಇದನ್ನು ಶುಕ್ರವಾರ ಪರಿಶೀಲಿಸಿ ಎಲ್ಲ್ಲ 16 ಮಳಿಗೆಗಳನ್ನು ಪುರಸಭಾ ಜೆಸಿಬಿಗಳ ಮೂಲಕ ತೆರವುಮಾಡಲಾಗಿದೆ ಎಂದು ತಿಳಿಸಿದರು.

ರೇಷ್ಮೆ ಇಲಾಖೆ, ಪ್ರವಾಸಿ ಮಂದಿರ ಸೇರಿ ಪಟ್ಟಣದಲ್ಲಿ ಹಲವು ಕಡೆಗಳಲ್ಲಿ ಸರ್ಕಾರಿ ಜಾಗಗಳಲ್ಲಿ ಅನಧಿಕೃತ ಅಂಗಡಿಗಳನ್ನು ಇಟ್ಟುಕೊಳ್ಳಲಾಗಿದೆ ಇವುಗಳ ತೆರವುಗೊಳಿಸುವ ಬಗ್ಗೆ ದೂರು ಬಂದಿದೆ. ಪ್ರಸ್ತುತ ಲೋಕಾಯುಕ್ತರಿಗೆ ದೂರು ನೀಡಿದ್ದ ಸ್ಥಳದ ಮಳಿಗೆಗಳನ್ನು ತೆರವು ಮಾಡಿದ್ದೇವೆ, ಇದರ ವರದಿಯನ್ನು ಸೋಮವಾರ ಡಿಸಿಗೆ ನೀಡುವಾಗ ಉಳಿದ ಅಂಗಡಿಗಳ ಬಗ್ಗೆ ತಿಳಿಸುತ್ತೇವೆ. ಡಿಸಿ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-------------