ಬೆಂಗಳೂರು: ನಗರದಾದ್ಯಂತ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿರುವ ಪಾಲಿಕೆ, ಜೂನ್ ತಿಂಗಳಲ್ಲಿ ಈವರೆಗೆ 1,259 ಫ್ಲೆಕ್ಸ್, ಬ್ಯಾನರ್, ಎಲ್ಇಡಿ ಹಾಗೂ ಹೋರ್ಡಿಂಗ್ಸ್ ತೆರವುಗೊಳಿಸಿದೆ. ಜತೆಗೆ ಪೊಲೀಸ್ ಠಾಣೆಯಲ್ಲಿ 27 ದೂರುಗಳನ್ನು ಸಲ್ಲಿಸಿ ಅದರಲ್ಲಿ 12 ಎ್ಐಆರ್ ದಾಖಲಿಸಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ಬಿಬಿಎಂಪಿಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018’ರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ ಅನುಮತಿಸಲು ಮಾತ್ರ ಅವಕಾಶವಿರುತ್ತದೆ. ಇವುಗಳನ್ನು ಹೊರತುಪಡಿಸಿ ಇತರ ಯಾವುದೇ ವಸತಿ ಪ್ರದೇಶ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತು, ಎಲ್ಇಡಿ ಜಾಹೀರಾತು ಪ್ರದರ್ಶಿಸುವುದನ್ನು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ-ಸಮಾರಂಭಗಳ ಕುರಿತ ಜಾಹೀರಾತು, ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟ ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಮತ್ತೆ ಮತ್ತೆ ಅಳವಡಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದಲ್ಲದೆ ನಗರದ ಸೌಂದರ್ಯ ಹಾಳಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರಿಕರು ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ ಜಾಹೀರಾತು ವಿಭಾಗದ ವಾಟ್ಸ್‌ಅಪ್ ಸಂಖ್ಯೆ 9480683939ಗೆ ಛಾಯಾಚಿತ್ರ ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.