ಚಾಮರಾಮಜನಗರ: ಸ್ಥಳ ನಿಗದಿಗೊಳಿಸಿದ್ದರೂ ಅಲ್ಲಿಗೆ ತೆರಳದೆ ನಗರದ ವಿವಿಧೆಡೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ನಗರದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸಂಚಾರ ವ್ಯವಸ್ಥೆಗೆ ಉಂಟಾಗುವ ಅಡಚಣೆ ತಪ್ಪಿಸಲು ಬೀದಿಬದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳ ಗುರುತಿಸಲು ಜಿಲ್ಲಾಡಳಿತ ಸೂಚಿಸಿತ್ತು. ಈ ಹಿನ್ನೆಲೆ ನಗರಸಭೆ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಿಂದ ಮಾರಿಗುಡಿ ಬೀದಿಯವರೆಗೂ ಸ್ಥಳ ನಿಗದಿ ಮಾಡಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಟ್ಟಿತ್ತು. ಅದರಂತೆ ಕೆಲವು ವ್ಯಾಪಾರಸ್ಥರು ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ವ್ಯಾಪಾರ ಮಾಡುತ್ತಿದ್ದರೆ, ಇನ್ನು ಕೆಲವರು ಮಹಾವೀರ ವೃತ್ತ, ದೊಡ್ಡ ಅಂಗಡಿ ಬೀದಿ ಹಾಗೂ ಹಳೇ ಮಾರುಕಟ್ಟೆ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು.
ಈ ಸಂದರ್ಭ ದಾಳಿ ನಡೆಸಿದ ಅಧಿಕಾರಿಗಳು ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ವ್ಯಾಪಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ವ್ಯಾಪಾರ ಆಗಲ್ಲ ಸ್ವಾಮಿ: ಜಿಲ್ಲಾಡಳಿತದ ಸೂಚನೆಯಂತೆ ನಿಗದಿಪಡಿಸಿರುವ ಜಾಗದಲ್ಲಿ ವ್ಯಾಪಾರ ನಡೆಯುವುದಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆಗೆ ತೊಂದರೆ ಎದುರಾಗುತ್ತದೆ ಎಂಬುದು ವ್ಯಾಪಾರಸ್ಥರು ಅಳಲಾಗಿದೆ.
ಎಲ್ಲ ವ್ಯಾಪಾರಸ್ಥರೂ ಒಂದೇ ಕಡೆ ಇರುವುದರಿಂದ ಕನಿಷ್ಠ ವ್ಯಾಪಾರವೂ ಸಹ ಆಗುವುದಿಲ್ಲ. ಗುರುತಿಸಿರುವ ಸ್ಥಳ ಅನೈರ್ಮಲ್ಯದಿಂದ ಕೂಡಿರುವುದರಿಂದ ಕೊಳ್ಳಲು ಅಲ್ಲಿಗೆ ಜನರೂ ಸಹ ಬರುವುದಿಲ್ಲ, ಹೀಗಾಗಿ ನಾವು ಇಲ್ಲೇ ವ್ಯಾಪಾರ ಮಾಡುತ್ತೇವೆ ಎಂದು ಮನವಿ ಮಾಡಿದರು. ಇದು ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವಾಗಿದೆ. ನೀವು ನಿಗದಿತ ಸ್ಥಳದಲ್ಲೇ ವ್ಯಾಪಾರ ಮಾಡಬೇಕೆಂದು ನಗರಸಭೆ ಅಧಿಕಾರಿಗಳು ಮನವರಿಕೆ ಮಾಡುವ ಮೂಲಕ ಅಲ್ಲಿಂದ ತೆರವುಗೊಳಿಸಿದರು.
ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಶರವಣ, ರಾಜಪ್ಪ, ಮಹದೇವಸ್ವಾಮಿ ಇದ್ದರು.