ದೇವದುರ್ಗದಲ್ಲಿ ಪುರಸಭೆ ಕಚೇರಿಗೆ ಹೊಂದಿಕೊಂಡು ಹಾಕಿದ್ದ ಡಬ್ಬಿ ಅಂಗಡಿಯನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. 
ಜಿಲ್ಲೆ

ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು

ನರೇಶ್ ಕುಮಾರ್

ದೇವದುರ್ಗ: ಪಟ್ಟಣದ ಹಳೇ ಬಸ್ ನಿಲ್ದಾಣ ಹಾಗೂ ಸಂತೆ ಬಜಾರ್ ಮುಖ್ಯರಸ್ತೆಯ ಎರಡೂ ಬದಿ ಫುಟ್‌ಪಾತ್ ಮೇಲೆ ಹಾಕಿಕೊಂಡಿದ್ದ ಗೂಡಂಗಡಿಗಳನ್ನು ಮಂಗಳವಾರ ತಾಲೂಕು ಆಡಳಿತ ಹಾಗೂ ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಜಿಲ್ಲಾಧಿಕಾರಿ ಕೆ.ನಿತೀಶ್ ಆದೇಶದ ಮೇರೆಗೆ ಪುರಸಭೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಸಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಸಾರ್ವಜನಿಕ ಕ್ಲಬ್ ಮೈದಾನದಿಂದ ತಾಲೂಕು ಆಡಳಿತ ಸೌಧದವರೆಗೆ ರಸ್ತೆ ಬದಿಯಲ್ಲಿ ನಿರ್ಮಿಸಿಕೊಂಡಿದ್ದ ಝರಾಕ್ಸ್, ಚಹಾ, ತಂಪುಪಾನೀಯ, ಹಣ್ಣಿನ ಅಂಗಡಿ, ತಳ್ಳುವ ಬಂಡಿಗಳು ಹಾಗೂ ಸಣ್ಣಪುಟ್ಟ ವ್ಯಾಪಾರ ಮಳೆಗೆಗಳನ್ನು ತೆರವು ಮಾಡಲಾಯಿತು.

ಫುಟ್‌ಪಾತ್ ಒತ್ತುವರಿ ಮಾಡಿ ರಸ್ತೆ ಸಮೀಪ ಹಾಕಿಕೊಂಡಿದ್ದ ಅಂಗಡಿ ಮಾಲೀಕರಿಗೆ ಕೆಲದಿನಗಳ ಹಿಂದೆ ನೋಟಿಸ್ ನೀಡಲಾಗಿತ್ತು. ತೆರವು ಮಾಡದ ಕಾರಣ ಕಾರ್ಯಾಚರಣೆ ನಡೆಸಲಾಗಿದೆ. ಜೆಸಿಬಿ ಮೂಲಕ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಿ ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಲಾಯಿತು. 50ಕ್ಕೂ ಹೆಚ್ಚು ಡಬ್ಬಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ವ್ಯವಸ್ಥಾಪಕ ಗಂಗಾಧರ್ ಇತರರಿದ್ದರು.

ನಾವೇನು ಮನೆ ನಿರ್ಮಿಸಿಕೊಂಡಿಲ್ಲ

ರಸ್ತೆಯ ಎರಡೂ ಬದಿಗೆ ಬಡವರು ಸಣ್ಣಡಬ್ಬಿ ಹಾಕಿಕೊಂಡು ವ್ಯಾಪಾರ ಮಾಡಿಕೊಂಡಿದ್ದು ಅವರ ಹೊಟ್ಟೆಮೇಲೆ ಅಧಿಕಾರಿಗಳು ಹೊಡೆದಿದ್ದಾರೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ಇಲಾಖೆ ಕಚೇರಿ ಹೊಂದಿಕೊಂಡು, ರಸ್ತೆ ಅಕ್ಕಪಕ್ಕದಲ್ಲಿ ಡಬ್ಬಿ ಹಾಕಲಾಗಿದೆ. ಇದು ಯಾರಿಗೂ ತೊಂದರೆ ಆಗಿರಲಿಲ್ಲ. 50 ರಿಂದ 1ಲಕ್ಷ ರೂ. ಸಾಲ ಮಾಡಿ ಹಾಕಿಕೊಂಡಿದ್ದೆವು. ನಾವೇನು ಜಾಗ ಅತಿಕ್ರಮಿಸಿ ಮನೆ ನಿರ್ಮಾಣ ಮಾಡಿಲ್ಲ. ವ್ಯಾಪಾರಕ್ಕಾಗಿ ಹಾಕಿಕೊಂಡಿದ್ದೇವೆ. ಕೂಡಲೇ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.