ಜಿಲ್ಲೆ

ಅಂಗಡಿ ಅತಿಕ್ರಮಣ ತೆರವು

Avinash R

ಬಂಟ್ವಾಳ: ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಣ್ಣು ಹಾಗೂ ಹೂ ಮಾರಾಟದ ಅಂಗಡಿಯೊಂದು ಪುಟ್​ಪಾತ್​ವರೆಗೆ ಶೀಟ್​ ಹಾಕಿ ವ್ಯಾಪಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ತಿರುವ ಬಗ್ಗೆ ಕೊನೆಗೂ ಪುರಸಭೆಯ ಸದಸ್ಯರು ಮೌನ ಮುರಿದ್ದಾರೆ.

ಬಿ.ಸಿ.ರೋಡಿನ ಗಣೇಶ್​ ಮೆಡಿಕಲ್​ ಬಳಿ ಇರುವ ಈ ಹಣ್ಣಿನ ಅಂಗಡಿ ಚಿಕ್ಕದಾಗಿದ್ದರೂ ಹೆಚ್ಚುವರಿ ಶೀಟ್​ಗಳನ್ನು ಅಳವಡಿಸಿ ಜನರು ನಡೆದಾಡುವ ಪುಟ್​ಪಾತ್​ವರಗೆ ವಿಸ್ತರಿಸಿಕೊಂಡಿದೆ. ಈ ಅಂಗಡಿಯ ಮುಂದೆ ಗ್ರಾಹಕರು ಖರೀದಿಗೆ ನಿಂತರೆ ಪುಟ್​ಪಾತ್​ನಲ್ಲಿ ನಡೆದಾಡುವ ಸಾರ್ವಜನಿಕರು ಮುಂದೆ ಸಾಗಲು ಪರದಾಡಬೇಕಾಗುತ್ತದೆ. ನಗರದ ಕೇಂದ್ರ ಭಾಗದಲ್ಲೇ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಅಂಗಡಿಗಳನ್ನು ಶೀಟ್​ ಹಾಕಿ ವಿಸ್ತರಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದಲೂ ದೂರುಗಳು ಕೇಳಿ ಬಂದಿವೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿಗಿಂತ ಹೆಚ್ಚು ವಿಸ್ತರಿಸಿ ಶೀಟ್​ಗಳನ್ನು ಹಾಕಿ ವ್ಯಾಪಾರ ನಡೆಸುವ ಅಂಗಡಿಗಳು ಹಲವಾರಿವೆ. ಈ ಹಿಂದೆಯೂ ಈ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದು ಅನಧಿಕೃತ ಶೀಟ್​ಗಳನ್ನು ತೆರವುಗೊಳಿಸಲು ದಿನ ನಿಗದಿ ಪಡಿಸಿದರೂ ರಾಜಕೀಯ ಒತ್ತಡದಿಂದ ಅದು ಸಾಧ್ಯವಾಗಿರಲಿಲ್ಲ.

ಬಿ.ಸಿ.ರೋಡಿನ ಗಣೇಶ್​ ಮೆಡಿಕಲ್​ ಬಳಿ ಕಾರ್ಯನಿರ್ವಹಿಸುತ್ತಿರುವ ಹೂ ಹಾಗೂ ಹಣ್ಣು ವ್ಯಾಪಾರ ಮಾಡುತ್ತಿರುವ ಈ ಅಂಗಡಿಯಲ್ಲಿ ಅನಧಿಕೃತವಾಗಿ ಹಾಕಿರುವ ಶೀಟ್​ಗಳನ್ನು ತೆರವುಗೊಳಿಸುವಂತೆ ಬುಧವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ಆಡಳಿತ ಪಕ್ಷದ ಸದಸ್ಯ ಮಹಮ್ಮದ್​ ಶರೀಫ್​ ವಿಷಯ ಪ್ರಸ್ತಾಪಿಸಿ ಅಂಗಡಿಯ ವ್ಯಾಪ್ತಿಯನ್ನು ಮೀರಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾರಣ ಇದನ್ನು ಶ್ರೀ ತೆರವುಗೊಳಿಸಬೇಕೆಂದು ಅಧ್ಯಕ್ಷರಲ್ಲಿ ಆಗ್ರಹಿಸಿದರು.