ಬೆಂಗಳೂರು: ಬಿಬಿಎಂಪಿ ಗುರುವಾರ ಆರಂಭಿಸಿದ ಹುಳಿಮಾವು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ರಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಕಾರ್ಯಾಚರಣೆ ಅರ್ಧಕ್ಕೆ ಮೊಟಕುಗೊಂಡಿದೆ.
ಹುಳಿಮಾವು ಕೆರೆ 124.25 ಎಕರೆ ವಿಸ್ತೀರ್ಣ ಹೊಂದಿದೆ. 5 ವರ್ಷಗಳ ಹಿಂದೆ ಕೆರೆ ನಿರ್ವಹಣೆ ಮಾಡುತ್ತಿದ್ದ ಬಿಡಿಎ ಮತ್ತು ಸ್ಥಳೀಯ ನಿವಾಸಿಗಳು 19 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಬಿಡಿಎ ಅತಿಕ್ರಮಿಸಿಕೊಂಡಿರುವ ಸ್ಥಳವನ್ನು ಬಿಟ್ಟು, ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿರ್ವಿುಸಿದ್ದ 14 ಮನೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಮುಂದಾಗಿದ್ದರು. ಇದಕ್ಕೆ ಶಾಸಕರು ಮತ್ತು ಸ್ಥಳೀಯರಿಂದ ವಿರೋಧ ವ್ಯಕ್ತವಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಎರಡು ಮನೆಗಳ ತೆರವು: ಕೆರೆ ಜಾಗದಲ್ಲಿ 14 ಖಾಸಗಿ ವ್ಯಕ್ತಿಗಳು ಮನೆ ನಿರ್ವಿುಸಿಕೊಂಡಿದ್ದಾರೆ. ಖಾಲಿ ಮಾಡಿದ್ದ 2 ಮನೆಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. 8 ಮನೆಗಳ ಮಾಲೀಕರು ತೆರವು ಕಾರ್ಯಾಚರಣೆ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ.
ಇನ್ನೆರಡು ಮನೆಯ ಮಾಲೀಕರು ಕೇವಲ 3ರಿಂದ 4 ಅಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸ್ಥಳವನ್ನು ಇನ್ನೊಂದು ವಾರದಲ್ಲಿ ತಾವೇ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಉಳಿದೆರಡು ಮನೆಗಳಲ್ಲಿ ವೃದ್ಧರು ವಾಸವಾಗಿದ್ದು, ಸ್ಥಳೀಯರೇ ತೆರವು ಮಾಡದಂತೆ ಒತ್ತಾಯಿಸಿದ್ದಾರೆ. ಮನೆ ಮಾಲೀಕರು ಇದ್ದಾಗ ಬಂದು ತೆರವುಗೊಳಿಸುವಂತೆ ಹೇಳಿ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ.
ಒತ್ತುವರಿ ಸಮೀಕ್ಷೆಯಲ್ಲಿ ತಾರತಮ್ಯ
ಕೆರೆ ಒತ್ತುವರಿ ಮಾಡಿಕೊಂಡಿರುವ 19 ಎಕರೆ ಪ್ರದೇಶದಲ್ಲಿ ನಿರ್ವಣವಾಗಿರುವ ಬಹುಮಡಿ ಕಟ್ಟಡಗಳನ್ನು ತೆರವು ಕಾರ್ಯಾಚರಣೆಯಿಂದ ಕೈಬಿಡಲಾಗಿದೆ. ಸಣ್ಣ ಮನೆಗಳು ಮತ್ತು ಶೆಡ್ಗಳನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ತಾರತಮ್ಯ ಆಧಾರಿತವಾದ ಇಂತಹ ಕಾರ್ಯಾಚರಣೆ ನಿಲ್ಲಿಸಬೇಕು. ಎಲ್ಲರಿಗೂ ಒಂದೇ ಸಮನಾದ ನ್ಯಾಯ ಒದಗಿಸಬೇಕು. ಒತ್ತುವರಿ ಮಾಡಿರುವ ಎಲ್ಲರ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಸ್ಥಳಕ್ಕೆ ಶಾಸಕ ಎಂ. ಕೃಷ್ಣಪ್ಪ ಭೇಟಿ
ಒತ್ತುವರಿ ತೆರವು ಸ್ಥಳಕ್ಕೆ ಬಂದ ಶಾಸಕ ಎಂ. ಕೃಷ್ಣಪ್ಪ ಅವರು ಅಧಿಕಾರಿಗಳ ಜತೆ ಮಾತನಾಡಿ ಕೆರೆ ಸ್ಥಳದಲ್ಲಿ ಸ್ಥಳೀಯರಿಗೆ ಮುನ್ಸೂಚನೆ ನೀಡದೆ ಮನೆ ಒಡೆದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಜನರು ವಾಸವಿರುವಾಗಲೇ ತೆರವು ಮಾಡಬಾರದು. ಮನೆ ಖಾಲಿ ಮಾಡಲು ಕಾಲಾವಕಾಶ ನೀಡಬೇಕು. 8 ಮನೆಗಳ ಮಾಲೀಕರು ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು. ಒತ್ತುವರಿ ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲು ಸಹಕರಿಸಲಾಗುವುದು ಎಂದರು.
ಕೆರೆಯ ಸುತ್ತ ಶುಕ್ರವಾರದಿಂದ ಗಡಿಬೇಲಿ ನಿರ್ವಿುಸಲಾಗುವುದು. ಒತ್ತುವರಿಯಾಗಿರುವ 35 ಗುಂಟೆ ಭೂಮಿಯಲ್ಲಿ ಬಾಸ್ಕೆಟ್ಬಾಲ್ ಮೈದಾನವಿದೆ. ಇದು ತಹಸೀಲ್ದಾರ್ ವ್ಯಾಪ್ತಿಯಲ್ಲಿದೆ. ಒತ್ತುವರಿ ಸ್ಥಳದಲ್ಲಿ ಬಿಡಿಎ ನಿರ್ವಿುಸಿರುವ ಅಪಾರ್ಟ್ ಮೆಂಟ್ ಮತ್ತು ರಸ್ತೆ ತೆರವಿಗೆ ಸರ್ಕಾರದ ಮಟ್ಟ ದಲ್ಲಿ ಚರ್ಚೆಯಾಗಬೇಕಿದೆ. ಶೀಘ್ರವೇ ಮತ್ತೊಮ್ಮೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. | ಮೋಹನ್ಕೃಷ್ಣ ಬಿಬಿಎಂಪಿ ಕೆರೆ ಅಭಿವೃದ್ದಿ ವಿಭಾಗದ ಇಂಜಿನಿಯರ್