ಜಿಲ್ಲೆ

ಸರ್ಕಾರಿ ಭೂಮಿ ಒತ್ತುವರಿ ತೆರವು, ತಹಸೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ, 2 ಎಕರೆ ಸರ್ಕಾರದ ಸ್ವಾಧೀನಕ್ಕೆ

Bengaluru Rural

ಆನೇಕಲ್: ತಾಲೂಕಿನ ಹುಲಿಮಂಗಲ ಸಮೀಪದ ಪೋಡು ಗ್ರಾಮದಲ್ಲಿ ಸುಮಾರು 24 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಹಂತ ಹಂತವಾಗಿ ತೆರವು ಮಾಡಲಾಗುವುದು ಎಂದು ಆನೇಕಲ್ ತಹಸೀಲ್ದಾರ್ ಮಹದೇವಯ್ಯ ತಿಳಿಸಿದರು.

ಪೋಡು ಗ್ರಾಮದ ಗುರುವಾರ ಹಮ್ಮಿಕೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಾತನಾಡಿದರು. ಗ್ರಾಮದ ಸರ್ವೇ ನಂಬರ್ 156ರಲ್ಲಿ ಸುಮಾರು 24.16 ಎಕರೆ ಸರ್ಕಾರಿ ಭೂಮಿಯನ್ನು ಒತ್ತು ವರಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ವಿಶೇಷ ಜಿಲ್ಲಾಧಿಕಾರಿಗಳು ಒತ್ತುವರಿದಾದರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಒತ್ತುವರಿ ದಾರರ ಬಳಿ ದಾಖಲೆ ಪರಿಶೀಲಿಸಿ ಅಂತಿಮವಾಗಿ ಇದು ಸರ್ಕಾರಿ ಭೂಮಿಯಾಗಿದೆ. ಈ ಕೂಡಲೆ ತೆರವು ಮಾಡಿ ಭೂಮಿ ವಶಕ್ಕೆ ಪಡೆಯ ಬೇಕೆಂದು ಆದೇಶಿಸದ್ದರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದರು.

ಸರ್ವೇ156/13ರಲ್ಲಿ ಎರಡು ಎಕರೆ ಭೂಮಿಯನ್ನು ಸರಸ ಮುನಿಸ್ವಾಮಿರೆಡ್ಡಿ ಎಂಬುವರು ಒತ್ತುವರಿ ಮಾಡಿ ಕೊಂಡು ಕೋಳಿ ಸಾಗಣೆಗೆ ಶೆಡ್ ನಿರ್ಮಿಸಿ ಕೊಂಡಿದ್ದರು. ಶೆಡ್ ಕೆಡವಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದರು.

ಇದೇ ಸರ್ವೇ ನಂಬರ್‌ನಲ್ಲಿ ಪ್ರತ್ಯೇಕ 16 ಪ್ರಕರಣಗಳಿದ್ದು, ವಾರದ ಹಿಂದೆ ಎರಡು ಎಕರೆ ಭೂಮಿ ವಶಕ್ಕೆ ಪಡೆದು ಕೊಂಡಿದ್ದೆವೆ. ಉಳಿದ 14 ಪ್ರಕರಣಗಳಲ್ಲಿ ಹಂತ ಹಂತವಾಗಿ ಒತ್ತುವರಿ ತೆರವು ಮಾಡಲಾಗುವುದು ಎಂದ ತಿಳಿಸಿದರು.

ಜಿಗಣಿ ಹೋಬಳಿಯಲ್ಲಿ ಹಸಿರು ವಲಯದಲ್ಲಿ ಅಕ್ರಮ ಬಡಾವಣೆ ನಿರ್ಮಾಣ ಮಾಡುತ್ತಿರುವ ದೂರು ಬಂದಿವೆ. ಈ ಬಗ್ಗೆ ಸುಮಾರು 400 ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಮುಂದೆ ಅಕ್ರಮ ಬಡಾವಣೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

1986 ರಲ್ಲಿ ಸರ್ವೆ ನಂ 156/13 ರಲ್ಲಿ ಎರಡು ಎಕರೆ ಭೂಮಿಯನ್ನು ಕ್ರಯಕ್ಕೆ ಪಡೆಯಲಾಗಿತ್ತು. ಅಂದಿನಿಂದಲೂ ಸ್ವಾಧೀನದಲ್ಲಿದ್ದು, ಕಾಲ ಕಾಲಕ್ಕೆ ತೆರಿಗೆ ಕಟ್ಟಲಾಗಿದೆ. ಆದರೂ ಅಧಿಕಾರಿಗಳು ಸರ್ಕಾರಿ ಭೂಮಿ ಎಂದು ಶೆಡ್ ತೆರವು ಮಾಡಿದ್ದಾರೆ. ನಮಗೆ ಆಗಿರುವ ಮೋಸಕ್ಕೆ ಹೊಣೆಯಾರು?. ಸರಸಮುನಿಸ್ವಾಮಿರೆಡ್ಡಿ ಭೂಮಿ ಕಳೆದುಕೊಂಡ ಮಾಲೀಕ