ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ಅಡ್ಡಿಪಡಿಸುತ್ತಿದ್ದ ಮಳಿಗೆಗಳ ಅನಧಿಕೃತ ಭಾಗಗಳು ಹಾಗೂ ರಸ್ತೆಬದಿ ಕಸವನ್ನು ಪಾಲಿಕೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು.
ಕೆಂಪೇಗೌಡ ವಾರ್ಡ್ ವ್ಯಾಪ್ತಿಯ ರೈತರ ಸಂತೆ (ಜಕ್ಕೂರು ಮುಖ್ಯರಸ್ತೆ), ಬಿ.ಬಿ.ರಸ್ತೆ, ಸರ್ಕಾರಿ ಆಸ್ಪತ್ರೆ ರಸ್ತೆ, ಯಲಹಂಕ ಟೌನ್ ಹಾಗೂ ಡೌನ್ ಬಜಾರ್ ರಸ್ತೆಗಳಲ್ಲಿ ರಸ್ತೆಬದಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಇಟ್ಟಿರುವ ಅಂಗಡಿ ಮುಂಗಟ್ಟುಗಳನ್ನು ಮಾರ್ಷಲ್ಗಳು ಹಾಗು ಪೊಲೀಸ್ ಸಿಬ್ಬಂದಿಗಳ ಸಹಯೋಗದೊಂದಿಗೆ ತೆರವುಗೊಳಿಸಿ ಫುಟ್‌ಪಾತ್ ಹಾದಿಗಳನ್ನು ಸಾರ್ವಜನಿಕರ ಓಡಾಟಕ್ಕೆ ಸುಗಮಗೊಳಿಸಲಾಯಿತು.
ಇತ್ತೀಚಿಗೆ ಯಲಹಂಕದ ರೈತರ ಸಂತೆ ಸುತ್ತಮುತ್ತಲಿನ ಫುಟ್‌ಪಾತ್‌ಗಳನ್ನು ಮಳಿಗೆದಾರರು ಹಾಗೂ ರಸ್ತೆಬದಿ ವ್ಯಾಪಾರಿಗಳು ಪೂರ್ಣವಾಗಿ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಂತೆಯೊಳಗೆ ಪ್ರವೇಶಿಸಲು ನಾಗರಿಕರಿಗೆ ತೊಂದರೆ ಆಗುತ್ತಿತ್ತು. ಜತೆಗೆ ಇಲ್ಲಿನ ಯಲಹಂಕ-ಜಕ್ಕೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದರಿಂದ ಸಮೀಪದ ಏರ್‌ಪೋರ್ಟ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕೃತಕ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಹಾಗೂ ಮಾಜಿ ಕಾರ್ಪೊರೇಟರ್‌ಗಳು ಪಾಲಿಕೆಗೆ ದೂರು ನೀಡಿದ್ದರು.
ದೂರು ಆಧರಿಸಿ ವಲಯ ಆಯುಕ್ತ ಕರಿಗೌಡ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಫುಟ್‌ಪಾತ್ ತೆರವಿಗೆ ಆದೇಶಿಸಿದ್ದರು. ತೆರವು ಕಾರ್ಯಾಚರಣೆ ವೇಳೆ ಪಾದಚಾರಿಗಳಿಗೆ ಅಡ್ಡಿಪಡಿಸುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ದಂಡ ವಿಧಿಸಿ, 12,000 ರೂ. ದಂಡದ ಹವನ್ನು ವಸೂಲಿ ಮಾಡಲಾಯಿತು.
ಕಾರ್ಯಾಚರಣೆ ನೇತೃತ್ವವನ್ನು ಯಲಹಂಕ ವಲಯದ ಸಹಾಯಕ ಕಾರ್ಯಪಾಲಕ ಅಭಿಯಂತರ, ಸಹಾಯಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆ ಪರಿವೀಕ್ಷಕರು ಸೇರಿ ಇನ್ನಿತರರು ಹಾಜರಿದ್ದರು.