ವಿಜಯಪುರ: ಮಹಾಯೋಜನೆಯಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿರುವ ಕಾರಣ ಮಹಾನಗರ ಪಾಲಿಕೆಯಿಂದ ಸೋಮವಾರ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮಹಾನಗರ ಪಾಲಿಕೆಯ ವಾರ್ಡ್ ನಂ. 2, 4, 6 ಮತ್ತು 35 ರಲ್ಲಿ ಬರುವ ಅಥಣಿ ರಸ್ತೆಯ ಇಟಗಿ ಪೆಟ್ರೋಲ್ ಪಂಪ್ದಿಂದ ವಿಜಯಪುರ& ಸೋಲಾಪುರ ರಸ್ತೆಯವರೆಗೆ ರಿಂಗ್ ರೋಡ್ ಮೇಲಿನ ಅತಿಕ್ರಮಣ ಆಸ್ತಿಗಳನ್ನು ತೆರವುಗೊಳಿಸಲಾಯಿತು.
ಬೆಳಗ್ಗೆ ಜೆಸಿಬಿ, ಟ್ರಾಕ್ಟರ್ ಮತ್ತಿತರ ಯಂತ್ರೋಪಕರಣಗಳೊಂದಿಗೆ ಆಗಮಿಸಿದ ಪಾಲಿಕೆ ಸಿಬ್ಬಂದಿ ಯಾವುದೇ ಮುಲಾಜಿಗೆ ಒಳಗಾಗದೇ ತೆರವು ಕಾರ್ಯಾಚರಣೆ ಆರಂಭಿಸಿದರು.
ಈಗಾಗಲೇ ಸಂಬಂಧಿಸಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಸೂಚಿಸಲಾಗಿತ್ತು. ಆ ಪ್ರಕಾರ ಹಲವಾರು ಕಟ್ಟಡ ಮಾಲೀಕರುಗಳು ಸ್ವಯಂ ಪ್ರೇರಿತವಾಗಿ ಅತಿಕ್ರಮಣ ಮಾಡಿದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿದ್ದರು. ಇನ್ನೂ ಹಲವಾರು ಕಟ್ಟಡ ಮಾಲೀಕರುಗಳು ತೆರವುಗೊಳಿಸದೇ ಇರುವುದರಿಂದ ತೆರವು ಕಾರ್ಯಾಚರಣೆ ಅನಿವಾರ್ಯವಾಯಿತೆಂದು ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡುತ್ತಾ, ವಿಜಯಪುರ ನಗರಕ್ಕೆ ಸರ್ಕಾರದಿಂದ 2022ರಲ್ಲಿ ಮಹಾ ಯೋಜನೆ ಅನುಮೋದನೆಯಾಗಿದ್ದು ನಗರದಲ್ಲಿರುವ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಆಸ್ತಿಗಳ ಮಾಲೀಕರು ಆಯಾ ರಸ್ತೆಯ ಅಗಲೀಕರಣಕ್ಕೆ ಅನುಗುಣವಾಗಿ ರಸ್ತೆ ಅಂಚಿನಿಂದ ನಿಗದಿಪಡಿಸಿದ ಕಟ್ಟಡ ರೇಖೆಗಳನ್ನು ಅಳವಡಿಸಿಕೊಂಡ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಕಲಂ&15 ರಂತೆ ಮತ್ತು ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ ಕಾಯ್ದೆ 1976ರ ಕಲಂ&300 ರಂತೆ ಪರವಾನಿಗೆ ಪಡೆದುಕೊಂಡು ನಿಯಮಾನುಸಾರ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.
ಮುಂಬರುವ ದಿನಗಳಲ್ಲಿ ಉಲ್ಲಂನೆ ಮಾಡಿ ಸಾರ್ವಜನಿಕ ಪ್ರದೇಶವನ್ನು ಒತ್ತುವರಿ ಮಾಡಿದ ಕಟ್ಟಡ ಅಥವಾ ಕಟ್ಟಡದ ಭಾಗವನ್ನು ಹಾಗೂ ಅಂಗಡಿಗಳನ್ನು ಗುರುತಿಸಿ ನಿಯಮಾನುಸಾರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ನಗರದಲ್ಲಿ ಅಭಿವೃದ್ಧಿ ಪರ ಚಟುವಟಿಕೆಗಳು ಚುರುಕುಗೊಂಡಿವೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು. ಈಗಾಗಲೇ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿದ್ದಾರೆ. ಮುಂದೆಯೂ ಇದೇ ರೀತಿ ಸಹಕರಿಸಬೇಕು. ಆದಷ್ಟು ಸ್ವಯಂ ಪ್ರೇರಿತವಾಗಿ ತೆರವು ಕಾರ್ಯ ಕೈಗೊಳ್ಳಬೇಕು. ವಿಜಯಕುಮಾರ ಮೆಕ್ಕಳಕಿ, ಆಯುಕ್ತರು ಮಹಾನಗರ ಪಾಲಿಕೆವಿಜಯಕುಮಾರ ಮೆಕ್ಕಳಕಿ, ಆಯುಕ್ತರು ಮಹಾನಗರ ಪಾಲಿಕೆ