ಜಿಲ್ಲೆ

ಬಂಡಿ, ಕಾಲುದಾರಿ ಒತ್ತುವರಿ ತೆರವು

ಬಂಗಾರಪೇಟೆ: ಲೋಕಾಯುಕ್ತ ನಿರ್ದೇಶನದ ಮೇರೆಗೆ ಕೆರೆಕೋಡಿಯ ಪುರಸಭೆ ವಾರ್ಡ್​ 27ರಲ್ಲಿ ಬಂಡಿದಾರಿ ಮತ್ತು ಕಾಲುದಾರಿ ಒತ್ತುವರಿ ಮಾಡಿ ಕಟ್ಟಿದ್ದ ಮನೆ ಮತ್ತು ಕಟ್ಟಡಗಳನ್ನು ಪೊಲೀಸ್​ ಬಂದೋಬಸ್ತ್​ನೊಂದಿಗೆ ಅಧಿಕಾರಿಗಳು ಶುಕ್ರವಾರ ತೆರುವುಗೊಳಿಸಿದರು.

ಕಂದಾಯ, ಸರ್ವೇ ಇಲಾಖೆ ಮತ್ತು ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ಮಾಡಿಕೊಂಡಿದ್ದ ಬಂಡಿದಾರಿಯ ಎಡ ಮತ್ತು ಬಲ ಭಾಗದ ಕಟ್ಟಡಗಳಿಗೆ ಮಾರ್ಕ್​ ಮಾಡಿ ತೆರವಿಗೆ ಮುಂದಾದರು.

ಕೆರೆಕೋಡಿ ನಿವಾಸಿ ಕೃಷ್ಣಮೂರ್ತಿ ಎಂಬುವರು ಬಂಡಿದಾರಿ ಮತ್ತು ಕಾಲುದಾರಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ತೆರುವುಗೊಳಿಸಿ ದಾರಿ ವ್ಯವಸ್ಥೆ ಮಾಡಿಕೊಡಬೇಕು ಎಂದು ತಹಸೀಲ್ದಾರ್​, ಎಸಿ, ಡಿಸಿಗೆ ಮನವಿ ಮಾಡಿದ್ದರು. ಆದರೆ ಏನೂ ಪ್ರಯೋಜನವಾಗದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಲೋಕಾಯುಕ್ತಕ್ಕೂ ದೂರು ನೀಡಿದ್ದರು.

ದೂರುದಾರರ ಮನವಿ ಪುರಸ್ಕರಿಸಿದ ಲೋಕಾಯುಕ್ತ ಅಧಿಕಾರಿಗಳು ಕಂದಾಯ ಮತ್ತು ಪುರಸಭೆ ಅಧಿಕಾರಿಗಳಿಗೆ ಜು.25ರ ಒಳಗೆ ಒತ್ತುವರಿ ತೆರುವುಗೊಳಿಸಲು ಗಡುವು ನೀಡಿದ್ದರು. ಜತೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಕ್ಕೆ ತಡೆ ನೀಡಿ, ಕಟ್ಟಡಗಳ ತೆರವಿಗೆ ಅಧಿಕಾರಿಗಳು ಸೂಚಿಸಿದ್ದರು. ಈ ಅವಧಿಯಲ್ಲಿ ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ತಮ್ಮ ವಿರುದ್ಧವೇ ಸೂಮೊಟೊ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೆರೆಕೋಡಿ ಬಡಾವಣೆಗೆ ಅಧಿಕಾರಿಗಳು ದೌಡಾಯಿಸಿ ಬಡಾವಣೆ ಮಧ್ಯೆ ಬರುವ ಮುಖ್ಯ ಬಂಡಿದಾರಿಯ 19.50 ಅಡಿ ಅಗಲದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಒತ್ತುವರಿ ಮಾಡಿರುವ ಸುಮಾರು ವಾಸದ ಕಟ್ಟಡಗಳಿಗೆ ಮಾರ್ಕ್​ ಮಾಡಿ ತೆರವಿಗೆ ಮುಂದಾದಾಗ ಕಟ್ಟಡ ಮಾಲೀಕರೇ ಮುಂದೇ ಬಂದು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುತ್ತಿದ್ದಾರೆ.

ಇನ್ನು ಲಕ್ಷ$್ಮಣ ಮೂರ್ತಿ, ಅಪ್ಪಯ್ಯ, ಶ್ರೀನಿವಾಸ್​ ಎಂಬುವವರ ಮನೆ ತೆರವು ಮಾಡದಂತೆ ಸ್ಥಳಿಯ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವು ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ಕಾರಹಳ್ಳಿಯ ಸ.ನಂ.151 ಮತ್ತು 1,2,3 ಹಾಗೂ 150, 157 ರಲ್ಲಿ ಬಂಡಿದಾರಿ ಒತ್ತುವರಿ ಮಾಡಿರುವ ಭೂಮಾಪನ ವರದಿಯಂತೆ ಶ್ರೀನಿನಾಸ, ಸುಬ್ರಮಣಿ, ಸೀನಪ್ಪ, ಮಂಜುನಾಥ, ಅಪ್ಪಯ್ಯ, ಮೂರ್ತಿ, ಮದ್ದೂರಿಗಾ, ಸಣ್ಣ ರಾಮಪ್ಪ, ಮುನಿವೆಂಕಟಪ್ಪ, ಕಾಕಪ್ಪ, ವೆಂಕಟರಾಮಪ್ಪ, ವೆಂಕಟರಮಣಪ್ಪ, ಕೃಷ್ಣಪ್ಪ, ಶಾಂತಮ್ಮ, ವೇಲು, ನಾಗರಾಜು, ಸೀನಪ್ಪ ಅವರಿಗೆ ನೋಟಿಸ್​ ಜಾರಿಹೊಳಿಸಿದ್ದು, ತೆರವು ಮಾಡುವಲ್ಲಿ ವಿಲವಾದರೆ ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 192(ಎ)ರಂತೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು ಮತ್ತು ಸದರಿ ಒತ್ತುವರಿ ತೆರುವುಗೊಳಿಸಿ ಇದ್ದಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವುದು ಎಂದು ತಹಸೀಲ್ದಾರ್​ ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಮೇಲೆ ಗುಮಾನಿ

ಬಂಡಿದಾರಿಯನ್ನು ಒತ್ತುವರಿ ಮಾಡಿ ಕಟ್ಟಿರುವ ಕಟ್ಟಡಗಳು ಪುರಸಭೆ ವ್ಯಾಪ್ತಿಯಲ್ಲಿದ್ದು, ಪಿಐಡಿ ಸಂಖ್ಯೆಯೂ ಇದೆ. ಪ್ರತಿ ವರ್ಷದಂತೆ ಪುರಸಭೆಗೆ ಕಂದಾಯ ಪಾವತಿ ಮಾಡಿಕೊಂಡು ಬಂದಿದ್ದು, ಆ ಸಮಯದಲ್ಲಿ ಪುರಸಭೆ ಅಧಿಕಾರಿಗಳು ದಾಖಲೆ ಪರಿಶೀಲಿಸದೆ ಒತ್ತುವರಿ ಕಟ್ಟಡಗಳಿಗೆ ಹೇಗೆ ಖಾತೆ ತೆರೆದಿದ್ದಾರೆ ಅನ್ನೋ ಅನುಮಾನಗಳಿಗೆ ಅಧಿಕಾರಿಗಳ ಬಳಿ ಸೂಕ್ತ ಉತ್ತರವಿಲ್ಲ.