ಜಿಲ್ಲೆ

ಆರ್.ಆರ್.ನಗರ ವಲಯದಲ್ಲಿ ಮಳೆ ನೀರುಗಾಲುವೆ ಒತ್ತುವರಿ ತೆರವು

ಬೆಂಗಳೂರು: ಆರ್.ಆರ್ ನಗರ ವಲಯದ ಎಚ್‌ಎಂಟಿ ವ್ಯಾಪ್ತಿಯಲ್ಲಿ ಬೃಹತ್ ನೀರು ಗಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಶೆಡ್ ಗಳನ್ನು ಸೋಮವಾರ ತೆರವುಗೊಳಿಸಲಾಯಿತು.

ಎಚ್‌ಎಂಟಿ ವಾರ್ಡ್‌ಗೆ ಸೇರಿರುವ ತುಮಕೂರು ಮುಖ್ಯರಸ್ತೆಯಿಂದ ಎಸ್‌ಆರ್‌ಎಸ್ ಸಿಗ್ನಲ್ ಕಡೆಗೆ ಹೋಗುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಹೊಂದಿಕೊಂಡಿರುವ ಈ ನೀರುಗಾಲುವೆಯ ಸುಮಾರು 100 ಮೀ. ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಜಾಗದಲ್ಲಿ ಸುಮಾರು 35-45 ಶೆಡ್‌ಗಳು ಹಾಗೂ ಒಂದು ಗ್ಯಾರೇಜ್ ನಿರ್ಮಿಸಲಾಗಿತ್ತು. ವಲಯ ಆಯುಕ್ತ ಸತೀಶ್ ನಿರ್ದೇಶನದ ಮೇರೆಗೆ ಪಾಲಿಕೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.

ಬೃಹತ್ ನೀರು ಗಾಲುವೆಯ ಮೇಲೆ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಎಲ್ಲ ಶೆಡ್‌ಗಳನ್ನು ತೆರವುಗೊಳಿಸುವ ಮುಂಚಿತವಾಗಿ ಸ್ಥಳದಲ್ಲಿ ವಾಸವಿದ್ದ ನಿವಾಸಿಗಳನ್ನು ಸ್ಥಳಾಂತರ ಮಾಡಿಸಲಾಯಿತು. ನಂತರ 2 ಜೆಸಿಬಿಗಳ ಮೂಲಕ ಶೆಡ್‌ಗಳು ಹಾಗೂ ಗ್ಯಾರೇಜ್ ತೆರವುಗೊಳಿಸಲಾಯಿತು. ಒತ್ತುವರಿ ಮಾಡಿಕೊಂಡಿದ್ದ ಸ್ವತ್ತನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೇಳೆ ಆರ್.ಆರ್.ನಗರ ವಲಯದ ಕಾರ್ಯಪಾಲಕ ಅಭಿಯಂತರ ಪಾಪರೆಡ್ಡಿ, ಕಂದಾಯ ವಿಭಾಗದ ಅಧಿಕಾರಿಗಳು ಸೇರಿ ಇನ್ನಿತರರು ಉಪಸ್ಥಿತರಿದ್ದರು.