ಕೆ.ಆರ್.ನಗರ: ಸರ್ಕಾರಿ ನಾಲಾ ಪರಿವೀಕ್ಷಣಾ ಪಥದ ಸೇವಾ ರಸ್ತೆಯನ್ನು ಸುಮಾರು 40 ವರ್ಷಗಳಿಂದ ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡ ಪರಿಣಾಮ ರೈತರಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಾರಂಗಿ ಅಧಿಕಾರಿಗಳು ಇತ್ತೀಚೆಗೆ ಒತ್ತುವರಿಯನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿದರು.
ತಾಲೂಕಿನ ಹಂಪಾಪುರ ಗ್ರಾಮದ ಸರ್ವೇ ನಂ.589 ಮತ್ತು 590ರ ಹಿಡುವಳಿದಾರರು ಸರ್ಕಾರಿ ನಾಲೆಯ ಪರಿವೀಕ್ಷಣಾ ಪಥದ ರಸ್ತೆಯನ್ನು ಒತ್ತುವರಿ ಮಾಡಿದ್ದರಿಂದ ಸುತ್ತಮುತ್ತಲಿನ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಣೆ ಮಾಡಲು ಅಡಚಣೆಯಾಗುತ್ತಿತ್ತು. ಈ ಬಗ್ಗೆ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹಾರಂಗಿ ಅಧಿಕಾರಿಗಳು ಒತ್ತುವರಿದಾರರಿಗೆ ಕೂಡಲೇ ತೆರವುಗೊಳಿಸುವಂತೆ ಈ ಹಿಂದೆ ನೋಟಿಸ್ ನೀಡಿದ್ದರು. ಇದನ್ನು ತಿರಸ್ಕರಿಸಿದ್ದರಿಂದ ತಾಲೂಕು ಸರ್ವೇ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಒತ್ತುವರಿ ತೆರವುಗೊಳಿಸಿದ್ದಾರೆ.
ಒತ್ತುವರಿ ತೆರವಿನಿಂದ ಹಂಪಾಪುರ ನಾಲಾ ವ್ಯಾಪ್ತಿಯ ಗ್ರಾಮಗಳಾದ ಬಾಲೂರು, ಗಂಧನಹಳ್ಳಿ, ಹಂಪಾಪುರ ಗ್ರಾಮದ ರೈತರಿಗೆ ಅನುಕೂಲವಾಗಿದ್ದು, ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಈ ಭಾಗದ ರೈತರು ಅಭಿನಂದನೆ ಸಲ್ಲಿಸಿದ್ದಾರೆ.
ಎಇಇ ಅಯಾಜ್ ಪಾಷಾ, ಎಇ ಕಿರಣ್, ಸರ್ವೇಯರ್‌ಗಳಾದ ಭಾಸ್ಕರ್, ಕುಮಾರಸ್ವಾಮಿ, ರೈತರಾದ ವಿಜಯ್ ಕುಮಾರ್, ಕೃಷ್ಣೇಗೌಡ, ಲೋಕೇಶ್, ಸೋಮಶೇಖರ್, ಅಲಮೇಲಮ್ಮ, ಜಗದೀಶ್, ಗಣೇಶ್, ದಿನೇಶ್, ಕೆಂಪೇಗೌಡ, ಮಹದೇವ, ಉಮೇಶ್, ಮಂಜುನಾಥ್, ಶ್ರೀನಾಥ್ ಇತರರಿದ್ದರು.