ಕೆ.ಆರ್.ಸಾಗರ ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ನಿಗಮ ಅಧಿಕಾರಿಗಳು ತೆರವುಗೊಳಿಸಿದರು. 
ಜಿಲ್ಲೆ

ಅಕ್ರಮವಾಗಿ ಒತ್ತುವರಿ ಮಾಡಿದ್ದ ಜಾಗ ತೆರವು

ಕೆ.ಆರ್.ಸಾಗರ: ಕೆ.ಆರ್.ಸಾಗರ ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗದಲ್ಲಿ ಖಾಸಗಿ ವ್ಯಕ್ತಿಯಿಂದ ಇಲಾಖೆಗೆ ಸೇರಿದ ವಸತಿ ಗೃಹ ಮತ್ತು ಸರ್ವೇ ನಂ.291 ರಲ್ಲಿ 4 ಎಕರೆ ಜಾಗ ಒತ್ತುವರಿ ಮಾಡಿದ್ದನ್ನು ಶನಿವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜೆಸಿಬಿ ಬಳಸಿ ತೆರವುಗೊಳಿಸಿದರು.

ಮಾಜಿ ಸಂಸದ ಅಂಬರೀಷ್ ಅನುದಾನದಲ್ಲಿ ಪ್ರಾರಂಭಿಸಿದ ಸಮುದಾಯ ಭವನ, ನಿಗಮದ ಎರಡು ವಸತಿಗೃಹಗಳು, ನೌಕರರ ಹಾಜರಾತಿ ಕಟ್ಟಡ ಸೇರಿದಂತೆ 4 ಎಕರೆ ಜಾಗದಲ್ಲಿ ತೆಂಗಿನ ಗಿಡಗಳನ್ನು ನೆಟ್ಟು ಅಕ್ರಮ ಕಟ್ಟಡ ನಿರ್ಮಿಸಲು ಪ್ರಾರಂಭಿಸಲಾಗಿತ್ತು. ಹೀಗಾಗಿ, ನಿಗಮ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಹಾಯಕ ಅಭಿಯಂತರರು ತೆರವುಗೊಳಿಸಿದರು.

ನಿಗಮದ ಕಾರ್ಯಪಾಲಕ ಆಭಿಯಂತರ ಜಯಂತ್ ಮಾತನಾಡಿ, ನಿಗಮಕ್ಕೆ ಸೇರಿದ ಜಾಗಗಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮ ದಾಖಲಾತಿ ಇಟ್ಟುಕೊಂಡು ಒತ್ತುವರಿ ಮಾಡಿಕೊಂಡಿದ್ದರು. ಈ ಕುರಿತು ಸ್ಥಳೀಯ ಶಾಸಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಒತ್ತುವರಿ ತೆರವು ಮಾಡಿ ವಶಪಡಿಕೊಳ್ಳಲಾಗಿದೆ. ಇದೇ ರೀತಿ ನಿಗಮದ ಜಾಗ ಒತ್ತುವರಿ ಮಾಡಿದ್ದರೆ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.