ಜಿಲ್ಲೆ

ರಕ್ಷಣಾ ಇಲಾಖೆ ಜಾಗದಲ್ಲಿ ನಡೆದ ಕಾಮಗಾರಿ ತೆರವು

ಹುಬ್ಬಳ್ಳಿ : ರಕ್ಷಣಾ ಇಲಾಖೆಗೆ ಸೇರಿರುವ ಜಾಗದಲ್ಲಿ ಸುಮಾರು 50 ಮೀಟರ್​ನಷ್ಟು ನಿರ್ವಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಮಿಲಿಟರಿ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಇಲ್ಲಿನ ವಿಶ್ವೇಶ್ವರ ನಗರದಲ್ಲಿ ಬುಧವಾರ ನಡೆದಿದೆ.

ವಿಶ್ವೇಶ್ವರನಗರದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ಮುಖ್ಯ ರಸ್ತೆಯಿಂದ ಸುಮಾರು 50 ಮೀಟರ್​ನಷ್ಟು ಕಾಂಕ್ರಿಟ್ ರಸ್ತೆ ಪಕ್ಕದ ರಕ್ಷಣಾ ಇಲಾಖೆಯ ಜಾಗದಲ್ಲಿ ಆಕಸ್ಮಿಕವಾಗಿ ನಿರ್ಮಾಣಗೊಂಡಿದೆ.

ಆ ಜಾಗದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದನ್ನು ಅರಿತ ಎನ್​ಸಿಸಿ 27ನೇ ಬಟಾಲಿಯನ್​ನ ಲೆಫ್ಟಿನೆಂಟ್ ಕರ್ನಲ್ ಜ್ಹೋರಾ ಎಂಬುವವರು, ನಿರ್ವಣಗೊಂಡಿರುವ ಸಿಮೆಂಟ್ ರಸ್ತೆ ತೆರವುಗೊಳಿಸುವಂತೆ ಎರಡು ದಿನಗಳ ಹಿಂದೆಯೇ ಸೂಚಿಸಿದ್ದರು ಎನ್ನಲಾಗಿದೆ.

ರಕ್ಷಣಾ ಇಲಾಖೆಯವರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಮಹೇಶ ಟೆಂಗಿನಕಾಯಿ, ಕಾಮಗಾರಿ ನಡೆಯುತ್ತಿದ್ದ ನೀಲನಕಾಶೆಯನ್ನು ಪರಿಶೀಲಿಸಿದ್ದಾರೆ. ರಕ್ಷಣಾ ಇಲಾಖೆಗೆ ಸೇರಿರುವ ಸುಮಾರು 17.01 ಎಕರೆ ಜಾಗ ವಿಶ್ವೇಶ್ವರ ನಗರದಲ್ಲಿ ಇದ್ದು, ಲೀಸ್ ಮೇಲೆ ಪಡೆಯಲು ಇರುವ ಅವಕಾಶವನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಲೆಫ್ಟಿನೆಂಟ್ ಕರ್ನಲ್, ರಕ್ಷಣಾ ಇಲಾಖೆಗೆ ಸೇರಿರುವ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಸೂಚಿಸಿದ್ದಾರೆ.

ಈ ಜಾಗವನ್ನು ನೀಡಿದರೆ ಸಸಿಗಳನ್ನು ನೆಟ್ಟು ಸಂಪೂರ್ಣ ಹಸೀರುಕರಣಗೊಳಿಸುವುದಾಗಿ ಸ್ಥಳದಲ್ಲಿದ್ದ ಸ್ಥಳೀಯರು ಇದೇ ಸಂದರ್ಭದಲ್ಲಿ ಲೆಪ್ಟಿನೆಂಟ್ ಕರ್ನಲ್​ಗೆ ಸಲಹೆ ನೀಡಿದ್ದಾರೆ. ರಕ್ಷಣಾ ಇಲಾಖೆಯ ಜಾಗದಲ್ಲಿ ಸಸಿಗಳನ್ನು ನೆಡಬಹುದು. ಆದರೆ, ಯಾವುದೇ ಕಾರಣಕ್ಕೆ ಬೋರ್​ವೆಲ್ ಕೊರೆಯುವ ಹಾಗಿಲ್ಲ. ಈ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಲೆಫ್ಟಿನೆಂಟ್ ಕರ್ನಲ್ ಸಲಹೆ ನೀಡಿದ್ದಾರೆ.

ಈ ಜಾಗದಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಿಕೊಡುವಂತೆ ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಹುಡಾ ಅಧ್ಯಕ್ಷ ಶಾಕೀರ ಸನದಿ ಅವರಲ್ಲಿ ಲೆಫ್ಟಿನೆಂಟ್ ಕರ್ನಲ್ ಮನವಿ ಮಾಡಿದ್ದಾರೆ.

ವಿಶ್ವೇಶ್ವರನಗರದಲ್ಲಿರುವ 17.01 ಜಾಗದ ಬದಲಾಗಿ ನಗರದ ಹೊರ ಪ್ರದೇಶದಲ್ಲಿ ಪರ್ಯಾಯ ಜಾಗ ನೀಡುವ ಬಗ್ಗೆ ಈಗಾಗಲೇ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳು ತೀರ್ವನಿಸಿದ್ದು, ಮೂರು ಪ್ರತ್ಯೇಕ ಜಾಗವನ್ನೂ ತೋರಿಸಿದ್ದಾರೆ. ಆದರೆ, ಇದುವರೆಗೆ ರಕ್ಷಣಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸಧ್ಯಕ್ಕೆ ರಕ್ಷಣಾ ಇಲಾಖೆ ಜಾಗದಲ್ಲಿ ಬಂದಿರುವ ಕಾಮಗಾರಿ ತೆರವುಗೊಳಿಸಿ, ಪಾಲಿಕೆ ವ್ಯಾಪ್ತಿಯ ರಸ್ತೆಯಲ್ಲಿ ಮಾತ್ರ ಮುಂದುವರೆಸುವಂತೆ ಸೂಚಿಸಲಾಗಿದೆ.

ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಬಿಜೆಪಿ ಮುಖಂಡರಾದ ಸಿದ್ದು ಮೊಗಲಿಶೆಟ್ಟರ, ರವಿ ನಾಯಕ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.