ಜಿಲ್ಲೆ

ಅನಧಿಕೃತ ಶೆಡ್‌ಗಳನ್ನು ಕೂಡಲೇ ತೆರವುಗೊಳಿಸಿ

ರಾಜಣ್ಣ

ನಾಗಮಂಗಲ: ಪಟ್ಟಣದಲ್ಲಿರುವ ಅನಧಿಕೃತ ಶೆಡ್‌ಗಳನ್ನು ಕೂಡಲೇ ತೆರವುಗೊಳಿಸುವ ಜತೆಗೆ ಪಟ್ಟಣದಲ್ಲಿ ಪರವಾನಗಿ ಪಡೆಯದೆ ನಿರ್ಮಾಣವಾಗಿರುವ ಹಲವು ಕಟ್ಟಡಗಳಿದ್ದು ಅಂತವುಗಳನ್ನು ಪತ್ತೆಹಚ್ಚಿ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುರಸಭೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.


ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳು ಹಾಗೂ ಪುರಸಭೆಯ ಚುನಾಯಿತ ಪ್ರತಿನಿಧಿಗಳ ಜತೆ ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾತನಾಡಿದರು.


ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಪಟ್ಟಣದ ಮಂಡ್ಯ ಮತ್ತು ಮೈಸೂರು ರಸ್ತೆಯಲ್ಲಿ ಅನಧಿಕೃತ ಶೆಡ್‌ಗಳು ಹೆಚ್ಚಾಗಿ ನಿರ್ಮಾಣವಾಗಿವೆ. ಇಷ್ಟು ಮಾತ್ರವಲ್ಲದೆ ಪಟ್ಟಣದ ಹಲವು ಕಡೆಗಳಲ್ಲಿಯೂ ಇದೇ ರೀತಿಯಲ್ಲಿ ಅಕ್ರಮ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕಿದೆ ಎಂದು ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಪುರಸಭೆ ವ್ಯಾಪ್ತಿಯಲ್ಲಿರುವ ಅಕ್ರಮ ಶೆಡ್‌ಗಳನ್ನು ಕೂಡಲೇ ಪೊಲೀಸರ ಸಹಾಯದೊಂದಿಗೆ ತೆರವುಗೊಳಿಸುವುದು ಮಾತ್ರವಲ್ಲದೆ, ಆ ಶೆಡ್‌ಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿ. ಪುರಸಭೆಗೆ ಸಂಬಂಧಿಸಿದ ಆಸ್ತಿಗಳಲ್ಲಿಯೂ ಹಲವರು ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವುದಾಗಿ ದೂರುಗಳಿವೆ. ಅಂತವುಗಳನ್ನು ತೆರವುಗೊಳಿಸಿ ಪುರಸಭೆಯ ಆಸ್ತಿಯನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಕಟ್ಟಡ ನಿರ್ಮಿಸಲು ಪರವಾನಗಿ ಪಡೆಯದಿರುವಂತಹ ಹಾಗೂ ಕಂದಾಯ ಕಟ್ಟದಿರುವಂತಹ ಎಲ್ಲ ಕಟ್ಟಡಗಳಿಗೂ ಕಾನೂನಾತ್ಮಕವಾಗಿ ಕ್ರಮ ಜರುಗಿಸಿ. ಈ ವಿಚಾರವಾಗಿ ಪುರಸಭೆಯ ಸರ್ವ ಸದಸ್ಯರು ಯಾವುದೇ ಶಿಫಾರಸುಗಳನ್ನು ಮಾಡದೆ ಸಹಕರಿಸುವ ಮೂಲಕ ಪಟ್ಟಣವನ್ನು ಸ್ವಚ್ಛವಾಗಿಡಲು ಸಹಕರಿಸಿ ಎಂದು ಮನವಿ ಮಾಡಿದರು.

ಬೆಂಗಳೂರು ಮಾದರಿಯಲ್ಲಿ ದಂಡ:
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗುತ್ತಿರುವುದರ ಜತೆಗೆ ಅಪಘಾತಗಳೂ ಸಂಭವಿಸಿವೆ. ಇನ್ನು ಕೆಲವೆಡೆ ಸರ್ಕಾರಿ ಕಚೇರಿಗಳ ಬಾಗಿಲುಗಳಿಗೆ ವಾಹನಗಳನ್ನು ನಿಲ್ಲಿಸಿ ಒಳ ಪ್ರವೇಶಿಸದಂತೆ ಜಮಾವಣೆಯಾಗಿರುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಒಂದು ಕಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದಲ್ಲದೆ, ಅವಶ್ಯವಿರುವ ಕಡೆಗಳಲ್ಲಿ ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಿ. ಇಷ್ಟಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಬೆಂಗಳೂರು ಮಾದರಿಯಲ್ಲಿ ವಾಹನಗಳ ಮಾದರಿಯಲ್ಲಿ ಮನೆಗೆ ದಂಡದ ನೋಟೀಸ್ ಕಳುಹಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ವತಿಯಿಂದ ಕೂಡಲೇ ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ತಿಳಿಸಿದರು.


ನಿಗದಿತ ಸ್ಥಳದಲ್ಲಿ ಮಾಂಸ ಮಾರಾಟ:

ಪಟ್ಟಣದ ಪ್ರಮುಖ ರಸ್ತೆ ಬದಿಗಳಲ್ಲಿ, ಕೆಲವು ದೇವಾಲಯಗಳ ಪಕ್ಕದಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿಯೂ ಮಾಂಸ ಮಾರಾಟ ಮಾಡುತ್ತಿರುವುದರಿಂದ ಬೀದಿನಾಯಿಗಳ ಕಾಟ ಹಾಗೂ ಅಶುಚಿತ್ವದಿಂದ ಗಬ್ಬು ವಾಸನೆ ಬರುತ್ತಿರುವುದಾಗಿ ನಿವಾಸಿಗಳ ದೂರುಗಳಿರುವುದರಿಂದ, ಪಟ್ಟಣದಲ್ಲಿ ಜನವಸತಿ ಪ್ರದೇಶದಿಂದ ಸ್ವಲ್ಪ ಅಂತರವಿರುವ ಸ್ಥಳದಲ್ಲಿ ಒಂದು ಕಡೆ ಜಾಗ ನಿಗದಿಪಡಿಸಿ ಆ ನಿಗದಿತ ಸ್ಥಳದಲ್ಲಿಯೇ ಮೀನು, ಕೋಳಿ, ಮೇಕೆ, ಕುರಿ ಮಾಂಸ ಸೇರಿದಂತೆ ಎಲ್ಲ ರೀತಿಯ ಮಾಂಸ ಮಾರಾಟವನ್ನು ನಡೆಸುವಂತೆ ಕ್ರಮವಹಿಸಬೇಕು. ಆ ಜಾಗದಲ್ಲಿ ಹೊರತುಪಡಿಸಿ ಬೇರೆ ಕಡೆಗೆ ಅನುಮತಿ ನೀಡದಿರಿ ಎಂದು ಮುಖ್ಯಾಧಿಕಾರಿಗೆ ಸಚಿವರು ಸೂಚಿಸಿದರು.

ಫುಟ್‌ಪಾತ್ ಅಂಗಡಿಗಳನ್ನು ಸ್ಥಳಾಂತರಿಸಿ:
ಪಟ್ಟಣದಲ್ಲಿರುವ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿರುವ ಫುಟ್‌ಪಾತ್ ಅಂಗಡಿಗಳು ಹಾಗೂ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ರಸ್ತೆಯಲ್ಲಿರುವ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಿ ವಿಜಯ ಬ್ಯಾಂಕ್ ಹಿಂಭಾಗದಲ್ಲಿರುವ ಪುರಸಭೆಗೆ ಸೇರಿರುವ ಖಾಲಿ ಜಾಗದಲ್ಲಿ ಮೂಲ ಸೌಲಭ್ಯ ಒದಗಿಸುವ ಮೂಲಕ ಸ್ಥಳಾಂತರಿಸಿ. ಪಟ್ಟಣದ ಸ್ವಚ್ಛತೆಗೆ ಫುಟ್‌ಪಾತ್ ವ್ಯಾಪಾರಿಗಳೂ ಸಹಕರಿಸಬೇಕಿದೆ. ಸ್ಲಂ ರೀತಿಯಲ್ಲಿ ನಾಗಮಂಗಲವನ್ನು ನೋಡದೆ, ಒಂದು ಸ್ವಚ್ಛ ಪಟ್ಟಣವನ್ನಾಗಿಸಲು ಯೋಜನೆ ರೂಪಿಸೋಣ ಎಂದರು.
ಫುಡ್‌ಜೋನ್ ನಿರ್ಮಿಸಲು ಕ್ರಮ:
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಗೋಬಿ, ಪಾನಿಪುರಿ, ಫಾಸ್ಟ್‌ಫುಡ್‌ನಂತಹ ಇನ್ನಿತರ ಚಾಟ್ಸ್‌ಸೆಂಟರ್‌ಗಳು ವ್ಯಾಪಾರ ನಡೆಸುತ್ತಿದ್ದು, ಅವುಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಹಾಗೂ ಪಟ್ಟಣದ ಅಶುಚಿತ್ವಕ್ಕೆ ಕಾರಣವಾಗುತ್ತಿರುವುದಾಗಿ ಹಲವು ದೂರುಗಳಿವೆ. ಆದ ಕಾರಣ ಒಂದೆಡೆಗೆ ಫಾಸ್ಟ್‌ಫುಡ್ ಹಾಗೂ ಚಾಟ್ ಸೆಂಟರ್‌ಗಳನ್ನು ಸ್ಥಳಾಂತರಿಸಿ ಫುಡ್‌ಜೋನ್ ನಿರ್ಮಿಸುವ ಕ್ರಿಯಾಯೊಜನೆ ರಚಿಸಿ ಸ್ಥಳ ನಿಗದಿ ಮಾಡಲು ಸಚಿವರು ಪುರಸಭೆ ಇಂಜಿನಿಯರ್‌ಗೆ ಸೂಚಿಸಿದರು.

ಮೂಲ ಸೌಲಭ್ಯಗಳಿಗೆ ಆದ್ಯತೆ:
ಪಟ್ಟಣದಲ್ಲಿನ ಖಾಸಗಿ ಬಸ್ ನಿಲ್ದಾಣ ಹಾಗೂ ಟಿಬಿ ವೃತ್ತದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾರ್ವಜನಿಕ ಶೌಚಗೃಹಗಳನ್ನು ನೆಲಸಮಗೊಳಿಸಿ ಹೈಟೆಕ್ ಶೌಚಗೃಹಗಳನ್ನು ನಿರ್ಮಿಸಿ. ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಿ, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಚರಂಡಿ ದುರಸ್ತಿ ಮತ್ತು ಒಳ ಚರಂಡಿಯ ನಿರ್ವಹಣೆಯನ್ನು ಸೂಕ್ತವಾಗಿ ನಿರ್ವಹಿಸಿ. ಉಳಿದ ಅಭಿವೃದ್ಧಿ ಕೆಲಸಗಳಿಗಿಂತ ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಿ ತದನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ತಿಳಿಸಿದರು.ಸಭೆಯಲ್ಲಿ ಚೌಡೇನಹಳ್ಳಿಯ ಅಂಗನವಾಡಿ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವುದು, ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಈಗಿರುವ ಪುರಸಭೆ ಕಾರ್ಯಾಲಯದ ಕಟ್ಟಡವನ್ನು ನೆಲಸಮಗೊಳಿಸಿ ಪಟ್ಟಣ ಪೊಲೀಸ್ ಠಾಣೆ ಎದುರು ಪುರಸಭೆ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ, ಪಟ್ಟಣದ ಟ್ಯಾಂಕ್ ಮೈದಾನದ ಬಳಿಯಿರುವ ಪುರಸಭೆಗೆ ಸೇರಿದ 3 ವಸತಿ ಗೃಹಗಳು ಶಿಥಿಲವಾಗಿದ್ದು, ಅವುಗಳನ್ನು ತೆರವುಗೊಳಿಸುವುದು ಸೇರಿದಂತೆ ಮುಂತಾದ ವಿಷಯಗಳ ಕುರಿತಾಗಿ ಚರ್ಚಿಸಲಾಯಿತು.

ರಮೇಶ್ ಅವಿರೋಧವಾಗಿ ಆಯ್ಕೆ:
ಪುರಸಭೆಯ 5ನೇ ವಾರ್ಡ್‌ನ ಸದಸ್ಯ ರಮೇಶ್ ಅವರನ್ನು ಅವಿರೋಧವಾಗಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಸಚಿವ ಎನ್.ಚಲುವರಾಯಸ್ವಾಮಿ ಘೋಷಿಸಿದರು. ರಮೇಶ್ ಅವರನ್ನು ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದರು. ಅವಿರೋಧವಾಗಿ ಆಯ್ಕೆಯಾದ ರಮೇಶ್ ಅವರನ್ನು ಪಕ್ಷತೀತವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೆಲ್ಲರೂ ಅಭಿನಂದಿಸಿ ಶುಭಕೋರಿದರು.
ಪುರಸಭೆ ಅಧ್ಯಕ್ಷ ಅಲೀಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಸದಸ್ಯರಾದ ತಿಮ್ಮಪ್ಪ, ಚನ್ನಪ್ಪ, ದಿವಾಕರ್, ಸೌಮ್ಯಾ ತಿರುಮಲಯ್ಯ, ಜಾಫರ್‌ಷರೀಫ್ ಮತ್ತಿತರಿದ್ದರು.