ಜಿಲ್ಲೆ

ಪರವಾನಗಿ ಇಲ್ಲದ ಪಾನಿಪುರಿ ಗಾಡಿ ತೆರವುಗೊಳಿಸಿ

ಆದರ್ಶ್. ಎಂ.ಕೆ.

ಮಡಿಕೇರಿ: ಸುಂಟಿಕೊಪ್ಪ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಸುಂಟಿಕೊಪ್ಪ ಪಂಚಾಯಿತಿ, ಪರವಾನಗಿ ಇಲ್ಲದ ಪಾನಿಪುರಿ ಗಾಡಿಯನ್ನು ತೆರವುಗೊಳಿಸಲು ಮಲತಾಯಿ ಧೋರಣೆ ತೋರುತ್ತಿದೆ ಎಂದು ವ್ಯಾಪಾರಿ ದಿನೇಶ್ ಆರೋಪಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಸುಂಟಿಕೊಪ್ಪ ಪಟ್ಟಣದಲ್ಲಿ ತನ್ನದು ಸೇರಿದಂತೆ ಇತರರು ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಆದರೆ, ತನಗೆ ಮಾತ್ರ ಯಾವುದೇ ನೋಟಿಸ್ ನೀಡದೇ ತೆರವುಗೊಳಿಸಿದ್ದಾರೆ. ಅಲ್ಲದೇ, ೧ ವರ್ಷದ ಹಿಂದೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ನನ್ನ ಪಾನಿಪುರಿ ಗಾಡಿಯನ್ನು ಇಡಲಾಗಿತ್ತು. ಕೆಲವು ದಿನಗಳ ನಂತರ ನನಗೆ ನೀಡಲಾಯಿತು. ಆದರೆ, ವರ್ಷ ಕಳೆದರು ಉಳಿದ ೧ ಅಂಗಡಿಯನ್ನು ಮಾತ್ರ ತೆರವುಗೊಳಿಸಿಲ್ಲ. ಈ ಸಂಬಂಧ ಆರ್‌ಟಿಐ ಮೂಲಕ ಮಾಹಿತಿ ಕೇಳಿದ ಸಂದರ್ಭ, ಆ ಅಂಗಡಿಗೆ ಹಲವು ವರ್ಷಗಳಿಂದ ಯಾವುದೇ ಪರವಾನಗಿ ಇಲ್ಲದಿರುವುದು ತಿಳಿದುಬಂದಿದೆ. ತೆರವಿಗೆ ಕ್ರಮ ವಹಿಸದೇ ಇರುವುದು ಮೇಲ್ನೋಟಕ್ಕೆ ಪಂಚಾಯಿತಿಯವರ ಕೈವಾಡ ಇರುವಂತೆ ತೋರುತ್ತಿದೆ ಎಂದು ದೂರಿದ್ದಾರೆ.


ಪರವಾನಗಿಯಿಲ್ಲದ ಅಂಗಡಿಯನ್ನು ತೆರವುಗೊಳಿಸುವಂತೆ ಪಂಚಾಯಿತಿಗೆ ದೂರು ನೀಡಿದರು ಕೂಡ ಇದುವರೆಗೂ ಕ್ರಮ ಕೈಗೊಂಡಿಲ್ಲ. ಅಲ್ಲದೇ, ದೂರು ನೀಡಲು ಹೋದ ಸಂದರ್ಭ ತನ್ನ ಮಳಿಗೆಯ ಮುಂಭಾಗ ನಿಲ್ಲಿಸಿರುವ ಗಾಡಿಯನ್ನು ತೆರವುಗೊಳಿಸುವಂತೆ ಒತ್ತಾಯಿಸುತ್ತಾರೆ. ಇಂತಹ ಕ್ರಮ ಸರಿಯಲ್ಲ. ಕಾನೂನು ಪ್ರತಿಯೊಬ್ಬರಿಗೆ ಒಂದೇ ರೀತಿ ಇರಬೇಕು. ಆದರೆ, ಸುಂಟಿಕೊಪ್ಪದಲ್ಲಿ ನಮಗೊಂದು, ತಮಗೊಂದು ಎಂಬಂತೆ ಕಾನೂನು ಮಾಡುತ್ತಿದ್ದಾರೆ ಎಂದು ದೂರಿದ ಅವರು, ಮುಂದಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ ಪರವಾನಗಿ ಇಲ್ಲದ ಪಾನಿಪುರಿ ಅಂಗಡಿಯನ್ನು ತೆರವುಗೊಳಿಸದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.