ಅಂಕೋಲಾ: ತಾಲೂಕಿನ ಶಿರೂರು ಶಾಲೆಯ ಹಿಂಬದಿಯ ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸುವ ಕುರಿತು ಶಾಲಾ ವಿದ್ಯಾರ್ಥಿಗಳ ಪಾಲಕರು ಮತ್ತು ಊರ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಚಂದ್ರನಾಥ ಮಡಿವಾಳ ಮಾತನಾಡಿ, ಜು. 15ರಂದು ಶಿರೂರು ಶಾಲೆಯ ಹಿಂಭಾಗದಲ್ಲಿ ಗುಡ್ಡು ಕುಸಿದಿತ್ತು. ಆಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತೆತೆಗಾಗಿ ಜು. 19 ರಂದು ನಡೆದ ಎಸ್ಡಿಎಂಸಿ ಸಭೆಯಲ್ಲಿ ಶಾಲೆಯ ಹಿಂಬದಿಯಲ್ಲಿ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ತನಕ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅವಧಿಗೆ ಬೇರೆ ಶಾಲೆಗೆ ಸ್ಥಳಾಂತರ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ತಹಸೀಲ್ದಾರ್ ಹಾಗೂ ಸಹಾಯ ಆಯುಕ್ತರು ಹಾಗೂ ಸ್ಥಳೀಯರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಸಭೆ ನಡೆದ 11 ದಿನ ಕಳೆದರೂ ಯಾವದೇ ರೀತಿಯ ಕ್ರಮಕೈಗೊಂಡಿಲ್ಲ. ವಿದ್ಯಾರ್ಥಿಗಳು ಪ್ರತಿ ದಿನ ಪಕ್ಕದ ಊರಿನಲ್ಲಿರುವ ಬೇರೆ ಶಾಲೆಗೆ ಬಸ್ ಮೂಲಕ ಹೋಗಿ ಬರುವುದು ತೊಂದರೆಯಾಗುತ್ತಿದೆ. ಹೀಗಾಗಿ ಶೀಘ್ರ ಶಾಲಾ ಹಿಂಭಾಗದ ಕುಸಿದ ಮಣ್ಣಿನ್ನು ತೆರವುಗೊಳಿಸುವ ಕೆಲಸ ಪ್ರಾರಂಭಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ್ ಅನಂತ ಶಂಕರ ಬಿ., ಮನವಿ ಸ್ವೀಕರಿಸಿದರು. ಮುನೇಶ ಗೌಡ ಮನವಿ ಓದಿದರು. ಬೆಳಸೆ ಗ್ರಾಪಂ ಸದಸ್ಯರಾದ ಗಣೇಶ ಗೌಡ, ಬುದುವಂತ ಗೌಡ, ಎಸ್ಡಿಎಂಸಿ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಪ್ರಮುಖರಾದ ತಿಲಕ ಗೌಡ, ಮಹೇಶ ಗೌಡ, ಮಧುಕರ ಗೌಡ, ಪಾಂಡು ಗೌಡ ಸೇರಿ ದಂತೆ ಇತರರಿದ್ದರು.