ತೇರಂಬಳ್ಳಿ ಗ್ರಾಮದಲ್ಲಿ ಅಡ್ಡಹಳ್ಳ ಒತ್ತುವರಿ ತೆರವಿಗೆ ಆಗ್ರಹಿಸಿ ರೈತರು ಕೊಳ್ಳೇಗಾಲದ ತಾಲೂಕು ಕಚೇರಿ ಮುಂಭಾಗ ಬುಧವಾರ ಧರಣಿ ಆರಂಭಿಸಿರುವುದು. 
ಜಿಲ್ಲೆ

ಅಡ್ಡಹಳ್ಳ ಒತ್ತುವರಿ ತೆರವು ಮಾಡಿ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನನೆಗುದ್ದಿಗೆ ಬಿದ್ದಿರುವ ಅಡ್ಡಹಳ್ಳ (ಸರ್ಕಾರಿ ದಾರಿ) ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ರೈತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ರೈತ ಮುಖಂಡ ಲೋಕೇಶ್ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಕಂದಾಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಪ್ರತಿಭಟನಾನಿರತರು ಅಸಮಾಧನ ಹೊರಹಾಕಿದರು.

ತೇರಂಬಳ್ಳಿ ಗ್ರಾಮದ ಸರ್ಕಾರಿ ದಾರಿ ಅಡ್ಡಹಳ್ಳ ಒತ್ತುವರಿಯಾಗಿದೆ. ಇದ್ದರಿಂದ ರೈತರು ಬೆಳೆ ಸಾಗಿಸಲು ತೊಂದರೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆಯೇ ರೈತರ ದೂರಿನಂತೆ ಕಂದಾಯ ಇಲಾಖೆ ಸರ್ವೇ ನಡೆಸಿದೆ. ಈ ವೇಳೆ ಒತ್ತುವರಿಯಾಗಿರುವುದು ತಿಳಿದು ಬಂದಿದೆಯಾದರೂ ತೆರವಿಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಉಪವಿಭಾಗಾಧಿಕಾರಿಯ ಗಮನ ಸೆಳೆಯಲಾಗಿದ್ದು, ಸೆ.11 ರೊಳಗೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ, ತೆರವು ಕಾಯಾಚರಣೆ ನಡೆದಿಲ್ಲ. ಹೀಗಾಗಿ ಧರಣಿ ಆರಂಭಿಸಲಾಗಿದೆ ಎಂದು ರೈತ ಮುಖಂಡ ಲೋಕೇಶ್ ತಿಳಿಸಿದರು.


ಪ್ರತಿಭಟನೆಯಲ್ಲಿ ಗ್ರಾಮದ ರೈತರಾದ ಸ್ವಾಮಿ, ಮಹೇಶ್, ಗಿರೀಶ್, ಗುರುಪಾದಪ್ಪ, ಪ್ರಭುಸ್ವಾಮಿ, ಬಸವಣ್ಣ, ಮಹೇಶ್, ವಿನೋದ್ ಮತ್ತಿತರರಿದ್ದರು.