ವಿಜಯಪುರ: ಜಮೀನಿನ ದಾರಿ ಸಮಸ್ಯೆ ಇತ್ಯರ್ಥಕ್ಕೆ ತಾಲೂಕು ದಂಡಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಸಮಸ್ಯೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.
ಹೀಗಾಗಿ ಗೊಂದಲ ನಿವಾರಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿರುವ ಅರವಿಂದ ಕುಲಕರ್ಣಿ, ದಾರಿ ಸಮಸ್ಯೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅನುಭೋಗದ ಹಕ್ಕಿನ ಕಲಂ 1882ನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ಆದೇಶದ ಪ್ರಕಾರ ರೈತರು ದಾರಿಗಾಗಿ ತಹಸೀಲ್ದಾರ್‌ಗಳಿಗೆ ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ. ಆದರೆ ತಹಸೀಲ್ದಾರ್‌ರು ನಕ್ಷೆಯಲ್ಲಿ ದಾರಿ ಗುರುತು ಇದ್ದರೂ ದಾರಿ ಕೊಡಲು ತಕರಾರು ಮಾಡಿದರೆ ಮಾತ್ರ ದಾರಿ ಮಾಡುತ್ತೇವೆ.
ದಾರಿ ಗುರುತು ಇರದಿದ್ದರೇ ಮಾಡಿಕೊಡುವುದಿಲ್ಲ. ಆ ರೀತಿಯಾಗಿ ಸರ್ಕಾರದ ಆದೇಶವಿದೆ ಎನ್ನುತ್ತಾರೆ. ಈ ರೀತಿಯಾದರೆ ಸರ್ಕಾರ ಆದೇಶ ಹೊರಡಿಸಿ ತಹಸೀಲ್ದಾರ್‌ರಿಗೆ ಅಧಿಕಾರ ನೀಡಿದರೂ ಪ್ರಯೋಜನವಿಲ್ಲ ಎಂದು ಅರವಿಂದ ಕುಲಕರ್ಣಿ ಮನವರಿಕೆ ಮಾಡಿದರು.
ಬಹುತೇಕ ಜಮೀನುಗಳಿಗೆ ಹೋಗಲು ನಕ್ಷೆಗಳಲ್ಲಿ ದಾರಿ ಗುರುತು ಸಿಗುವುದು ಅಪರೂಪ. ಸಾವಿರದಲ್ಲಿ ಒಬ್ಬ ರೈತನಿಗೆ ಮಾತ್ರ ನಕ್ಷೆಯಲ್ಲಿ ದಾರಿ ಗುರುತು ಸಿಗಬಹುದು.
ಸರ್ಕಾರ ಹೊರಡಿಸಿದ ಸುತ್ತೋಲೆಯ 2ನೇ ಪ್ಯಾರಾದಲ್ಲಿ ಮಾತ್ರ ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ತಕರಾರು ಮಾಡಿದರೆ, ರೈತರು ಬಹು ಕಾಲದಿಂದ ಬಳಸುವ ದಾರಿಗಳಲ್ಲಿ ಅನ್ಯ ರೈತರು ತಕರಾರು ಮಾಡಿದರೆ ಅನುಭೋಗದ ಹಕ್ಕಿನಡಿ ಕಲಂ 1882 ರ ಪ್ರಕಾರ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದಾರೆ ಎಂದು ಸುತ್ತೋಲೆಯ ಪ್ಯಾರಾ 2, 4ರಲ್ಲಿ ಮಾತ್ರ ಇದ್ದು, ಇದನ್ನೇ ನೆಪ ಮಾಡಿಕೊಂಡು ತಹಸೀಲ್ದಾರ್‌ರು ಸಮಸ್ಯೆ ಇತ್ಯರ್ಥ ಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸರ್ಕಾರದ ಸುತ್ತೋಲೆ ತಿದ್ದುಪಡಿಗೊಳಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಪಾಂಡು ಹ್ಯಾಟಿ, ಹೊನಕೆರೆಪ್ಪ ತೆಲಗಿ, ಚಂದ್ರಾಮ ಹಿಪ್ಪಲಿ, ಪ್ರಭುಗೌಡ ಪೊತರೆಡ್ಡಿ, ಲಾಲಸಿಂಗ ರಾಠೋಡ, ಜಗದೀಶ ಎಚ್.ಎಂ, ಜಯಪ್ರಕಾಶ ಸಜ್ಜನ ಮತ್ತಿತರರಿದ್ದರು.