ವಿಜಯಪುರ: ಕಾಯಕಯೋಗಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಸ್ಪಷ್ಟವಾದ ಸಾಮ್ಯತೆಗಳಿವೆ. ಇಬ್ಬರೂ ಮಹನೀಯರು ಕೂಡ ಸಮಾಜದಲ್ಲಿ ಸಮಾನತೆಗಾಗಿ ಬದ್ಧರಾಗಿ, ಅಸ್ಪಶ್ಯತೆ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವ ಹಾಗೂ ಜಾಗೃತ ಕರ್ನಾಟಕ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ "ಅಂಬೇಡ್ಕರ್ ಹಬ್ಬ' ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಪ್ರಸ್ತುತ ಎಂದರು.
ಪ್ರಸ್ತುತ ದಿನದಲ್ಲಿ ಬಸವ ಭಾರತ ಮತ್ತು ಅಂಬೇಡ್ಕರ್ ಭಾರತ ಎಂಬ ಸಮಾನತೆಯ ಆಧಾರಿತ ಸಮಾಜ ನಿರ್ಮಾಣ ಅವಶ್ಯವಿದೆ. ಅಂಬೇಡ್ಕರ್ ಹಬ್ಬ ಆಯೋಜಿಸುವ ಮೂಲಕ ಶ್ರೀನಾಥ ಪೂಜಾರಿ ಮತ್ತು ತಂಡದವರು ಅತ್ಯುತ್ತಮ ಕಾರ್ಯಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅನುಭವ ಮಂಟಪದ ಮಾದರಿಯಲ್ಲಿ ಈ ಹಬ್ಬ ಮುಂದುವರಿಯಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಅವರು ಹೇಳಿದರು.
ಸಂವಿಧಾನ ಭಾರತದ ಹೃದಯವಿದ್ದಂತೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಮನುಸ್ಮ$ತಿ ಮರಳಿ ತರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸಚಿವರು ತಿಳಿಸಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಕೆಲಸ ಮಾಡುವ ಡಿಸಿ, ಎಸ್ಪಿ, ಸಿಇಒ ಅಧಿಕಾರಿಗಳನ್ನು ಜಿಲ್ಲೆಗೆ ತಂದಿದ್ದಾರೆ. ಈ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಹಬ್ಬ ಸಮಾಜಮುಖಿ ಚಿಂತನೆಗಳನ್ನು ಮಂಥನ ಮಾಡಲು ಸಹಕಾರಿಯಾಗಿವೆ. ಅಂಬೇಡ್ಕರ ಚಿಂತನೆಗಳ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.
ಎಸ್ಪಿ ಲಕ್ಷ$್ಮಣ ನಿಂಬರಗಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಉತಷ್ಟ ಸಂವಿಧಾನ ನೀಡುವ ಮೂಲಕ ದೇಶದಲ್ಲಿ ಸರ್ವಜನರ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಇತರ ದೇಶಗಳಿಗೆ ಮಾದರಿಯಾದ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಸಚಿವರು ಪ್ರಶಸ್ತಿ ಪ್ರಧಾನ ಮಾಡಿದರು.
ಭಾರತೀಯ ಬೌದ್ಧ ಸಭಾ ರಾಜ್ಯ ಸಂಟನಾ ಕಾರ್ಯದರ್ಶಿ ಬಸವರಾಜ ಹೊಳ್ಕರ, ಮುಖಂಡರಾದ ಚನ್ನು ಕಟ್ಟಿಮನಿ, ಸೋಮನಾಥ ಕಳ್ಳಿಮನಿ, ಸಂಜೀವ ಕಂಬಾಗಿ, ಆರತಿ ಶಹಾಪುರ, ಅಡಿವೆಪ್ಪ ಸಾಲಗಲ, ಸುನೀತಾ, ರೇಣುಕಾ, ಅಯಕುಮಾರ, ಬಸವರಾಜ ಮತ್ತಿತರರಿದ್ದರು.