ಜಿಲ್ಲೆ

ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ

ಪ್ರಸಿನ್ ಕೆ.ಆರ್

ನಾಗಮಂಗಲ: ತಾಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲುಕೋಟೆ ಸರ್ಕಲ್‌ನಲ್ಲಿ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿರುವ ಅಂಗಡಿ ಮಳಿಗೆಗಳನ್ನು ಕೂಡಲೇ ತೆರವುಗೊಳಿಸುವಂತೆ ಸಚಿವ ಎನ್. ಚಲುವರಾಯಸ್ವಾಮಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಬೋಗಾದಿಯ ಸಂತೆ ಮೈದಾನದಲ್ಲಿ ಭಾನುವಾರ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದರು.

ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಆರ್.ಪೇಟೆ ಮತ್ತು ನಾಗಮಂಗಲ ರಸ್ತೆ ಹಾಗೂ ಮೇಲುಕೋಟೆ ರಸ್ತೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಸರ್ಕಾರಿ ಜಮೀನಿನಲ್ಲಿ ಹತ್ತಾರು ಅಂಗಡಿ ಮಳಿಗೆಗಳಿದ್ದು, ಅವುಗಳನ್ನು ತೆರವುಗೊಳಿಸಿ ಸರ್ಕಾರಿ ಜಮೀನು ಉಳಿಸುವಂತೆ ಸಾರ್ವಜನಿಕರು ಸಚಿವರಲ್ಲಿ ಮನವಿ ಮಾಡಿದರು. ಈ ಕುರಿತಾಗಿ ಮಾಹಿತಿ ಪಡೆದ ಸಚಿವರು ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ಅಂಗಡಿಗಳನ್ನು ಕೂಡಲೇ ತೆರವುಗೊಳಿಸುವಂತೆ ಉಪವಿಭಾಗಾಧಿಕಾರಿ ನಂದೀಶ್ ಹಾಗೂ ತಹಸೀಲ್ದಾರ್ ನಯೀಂ ಉನ್ನಿಸಾ ಅವರಿಗೆ ಸೂಚಿಸಿದರು.

ಅಂಗಡಿ ಮಳಿಗಗಳ ಮಾಲೀಕರು ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು, ವಿದ್ಯುತ್ ಸಂಪರ್ಕವನ್ನು 24 ಗಂಟೆಯೊಳಗೆ ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸುವಂತೆ ಸೆಸ್ಕ್ ಎಇಇ ಮರಿಸ್ವಾಮಿ ಅವರಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತೆರಳಿ ಕುಂದುಕೊರತೆ ಆಲಿಸಲಾಗುತ್ತಿದೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳು
ಸಭೆಯಲ್ಲಿ ಕಂದಾಯ, ಕುಡಿಯುವ ನೀರು, ಪಂಚಾಯತ್ ರಾಜ್, ಸರ್ವೇ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸೆಸ್ಕ್ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ 50 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಎಲ್ಲ ಅರ್ಜಿದಾರರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸಚಿವರು ಅರ್ಜಿಯ ಮೇಲೆ ತಮ್ಮ ಸಹಿ ಹಾಕಿ ಅಧಿಕಾರಿಗಳಿಗೆ ವರ್ಗಾಯಿಸಿದರು.

ಸಭೆಯಲ್ಲಿ ಬೋಗಾದಿ ಸರ್ಕಲ್‌ಗೆ ಪೊಲೀಸ್ ಠಾಣೆ, ಮಾರನಾಯಕನಹಳ್ಳಿ ರಸ್ತೆ ಕಾಮಗಾರಿ, ಬೋಗಾದಿ ಸರ್ಕಲ್‌ನಲ್ಲಿ ಹೈಮಾಸ್ಕ್ ಲೈಟ್, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆ, ಶಿಥಿಲಗೊಂಡಿರುವ ವಿದ್ಯುತ್ ಕಂಬಗಳ ತೆರವು, ಪೌತಿ ಖಾತೆ, ಗೃಹಲಕ್ಷ್ಮೀ ಹಣ, ಜೆಜೆಎಂ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದರು.

ಉಪವಿಭಾಗಧಿಕಾರಿ ನಂದೀಶ್, ತಹಸೀಲ್ದಾರ್ ನಯೀಂ ಉನ್ನಿಸಾ, ಎಡಿಎಲ್‌ಆರ್ ಪ್ರಮೋದ್, ತಾ.ಪಂ. ಇಒ ಚಂದ್ರಮೌಳಿ, ಪಿಡಿಒ ಕೃಷ್ಣಮೂರ್ತಿ, ಬಿಇಒ ಸುರೇಶ್, ರಾಜಸ್ವ ನಿರೀಕ್ಷಕ ಮಧುಸೂಧನ್, ಪಿಎಸ್‌ಐ ಅನ್ನಪೂರ್ಣ, ಮುಖಂಡರಾದ ಸುಖಧರೆಲಕ್ಷ್ಮೀ ನಾರಾಯಣ್, ದೇವರಾಜು, ಕೃಷ್ಣೇಗೌಡ, ಎನ್.ಜೆ.ರಾಜೇಶ್ ಇತರರು ಇದ್ದರು.

ನೀವೇ ಚಲುವರಾಯಸ್ವಾಮಿ ಆಗಬೇಕು:
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಹಳ್ಳಿಗೂ ತೆರಳಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಪಕ್ಷದ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ನೀವೇ ಚಲುವರಾಯಸ್ವಾಮಿ ಆಗಿ ಕೆಲಸ ಮಾಡಬೇಕಿದೆ. ತಾಲೂಕಿನ ಅಭಿವೃದ್ಧಿಯನ್ನು ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಚುನಾವಣೆಯಲ್ಲಿ ಮತ ಕೇಳಬೇಕಿದೆ ಎಂದರು.

ಫಲಾನುಭವಿಗಳಿಗೆ ಪತ್ರಗಳ ವಿತರಣೆ:
ಅಮೃತ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಮಠದಭೂವನಹಳ್ಳಿ ಗ್ರಾಮದ ಜನರಿಗೆ ಖಾತೆ, ಆರ್‌ಟಿಸಿ ತಿದ್ದುಪಡಿ, ಪೌತಿ ಖಾತೆ ಸೇರಿದಂತೆ ವಿವಿಧ ಯೋಜನೆಗಳ ಪತ್ರವನ್ನು ಫಲಾನುಭವಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ವಿತರಿಸಿದರು.