ಜಿಲ್ಲೆ

ಅಕ್ರಮ ಗೂಡಂಗಡಿ ತೆರವುಗೊಳಿಸಿ

ಉತ್ತರ ಕನ್ನಡ ಡೆಸ್ಕ್

ಸಿದ್ದಾಪುರ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವುದೇ ಬೆದರಿಕೆಗೆ ಹೆದರದೆ ಪಟ್ಟಣದ ರಾಜಮಾರ್ಗದಲ್ಲಿರುವ ಎರಡು ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಬೇಕು ಎಂದು ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಆಗ್ರಹಿಸಿದರು.

ಸ್ಥಳೀಯ ಪಪಂ ಸಭಾಂಗಣದಲ್ಲಿ ಪಪಂ ಆಡಳಿತಾಧಿಕಾರಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ರಾಜಮಾರ್ಗದ ಪ್ರಾರಂಭದಲ್ಲಿ ಎರಡು ಗೂಡಂಗಡಿಗಳನ್ನು ಅಕ್ರಮವಾಗಿ ಇಡಲಾಗಿದೆ. ಅಧಿಕಾರಿಗಳು ಕೇಳಲು ಹೋದರೆ ಅಟ್ರಾಸಿಟಿ ಕೇಸ್ ಹಾಕಲಾಗುವುದು ಎಂದು ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಕೂಡಲೇ ಈ ಅಂಗಡಿಗಳನ್ನು ತೆರವುಗೊಳಿಸಬೇಕು. ಕಾನೂನು ಎಲ್ಲರಿಗೂ ಒಂದೇ. ಅಧಿಕಾರಿಗಳು ಇಂತಹ ಬೆದರಿಕೆಗೆ ಹೆದರದೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಪಂ ಮಾಜಿ ಉಪಾಧ್ಯಕ್ಷ ರವಿಕುಮಾರ ನಾಯ್ಕ ಮಾತನಾಡಿ, 15 ವರ್ಷಗಳಿಂದ ರಸ್ತೆಗಳ ಮೇಲೆ ಅಂಗಡಿಗಳನ್ನು ಹಾಕುವುದು ನಿಂತಿತ್ತು. ಇದೀಗ ಮತ್ತೆ ರಸ್ತೆಗಳ ಮೇಲೆಯೇ ಅಂಗಡಿಗಳನ್ನು ಹಾಕಲಾಗುತ್ತಿದೆ. ಅಂತಹ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವಾರ್ಡ್ ನಂ.4ರ ಸದಸ್ಯ ಸುಧೀರ್ ನಾಯ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸದಸ್ಯ ನಂದನ ಬೋರ್ಕರ್ ಮಾತನಾಡಿ, ಪಪಂ ಆಡಳಿತದಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಸಭೆಗಳ ಮಾಹಿತಿ ತಿಳಿಸುತ್ತಿಲ್ಲ. ನಮ್ಮ ಸಮಾಜಕ್ಕೆ ಸೇರಿದ ಅಂಬೇಡ್ಕರ್ ಭವನದಲ್ಲಿ ಪಪಂ ಸಾಮಗ್ರಿಗಳನ್ನು ತುಂಬಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪಪಂ ಸದಸ್ಯರಾದ ಮಾರುತಿ ಟಿ. ನಾಯ್ಕ, ಗುರುರಾಜ ಶಾನಭಾಗ, ಸುಧೀರ್ ನಾಯ್ಕ, ವಿನಯ ಹೊನ್ನೆಗುಂಡಿ, ವೆಂಕೋಬಾ, ವಿಜೇಂದ್ರ ಗೌಡರ್, ಚಂದ್ರಕಲಾ ನಾಯ್ಕ, ರಾಧಿಕಾ ಕಾನಗೋಡು, ಮಂಜುಳಾ ನಾಯ್ಕ, ಯಶೋಧಾ ಮಡಿವಾಳ, ಕವಿತಾ ಹೆಗಡೆ, ಮುಖ್ಯಾಧಿಕಾರಿ ಜಯರಾಮ ನಾಯ್ಕ ಅಧಿಕಾರಿಗಳಿದ್ದರು.