ರಾಯಚೂರು: ನಗರದ ವಾರ್ಡ್ 28ರಲ್ಲಿ ಬರುವ ಸಂತೋಷಿ ನಗರ ಬಡಾವಣೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಮೀಸಲಿರಿಸಿದ ಸಿಎ ನಿವೇಶನವನ್ನು ಅತಿಕ್ರಮಣ ಮಾಡಿಕೊಂಡು ದೇವಸ್ಥಾನ ನಿರ್ಮಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಮಂಗಳವಾರ ಮನವಿ ಸಲ್ಲಿಸಿ, ಕೂಡಲೇ ಶಾಲಾ ಸ್ಥಳವನ್ನು ಅತಿಕ್ರಮಣ ಮಾಡಿ ದೇವಸ್ಥಾನ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಸರ್ವೇ ನಂ.384/1ಎ ವಸತಿ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಸರ್ಕಾರಿ ಪ್ರೌಢಶಾಲೆಗೆ ನಗರಾಭಿವೃದ್ಧಿ ಪ್ರಾಕಾರದಿಂದ ಹಂಚಿಕೆಯಾಗಿದ್ದು, 2022ರಲ್ಲಿ ನೋಂದಣಿಯಾಗಿದೆ. ಆದರೆ ಬಡಾವಣೆಯ ಕೆಲವರು ದೇವಸ್ಥಾನದ ಹೆಸರಿನಲ್ಲಿ ನಿವೇಶನ ಕಬಳಿಸುವ ಹುನ್ನಾರ ನಡೆಸಿದ್ದಾರೆ.
ತಾತ್ಕಾಲಿಕ ಶೆಡ್ ಹಾಕಿ ದೇವಸ್ಥಾನವನ್ನಾಗಿ ಮಾಡಲಾಗಿದ್ದು, ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಮನೆ ಪಕ್ಕದಲ್ಲಿ ಶಾಲೆ ನಿರ್ಮಾಣವಾದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ, ಪದಾಕಾರಿಗಳಾದ ಶ್ರೀನಿವಾಸ ಕಲವಲದೊಡ್ಡಿ, ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕೊಪ್ಪರ, ಎಸ್.ನರಸಿಂಹಲು, ರಮೇಶ, ತಿಮ್ಮಪ್ಪ ಕಡಗೋಲ, ಸಾದೀಕ್ ಪಾಷಾ, ತಾಯಣ್ಣ ಗಧಾರ್, ಲಕ್ಷ್ಮಣ, ಶ್ರೀಕಾಂತ, ಎ.ರಾಮು ಇದ್ದರು.