ಮಾಸೂರು ಗ್ರಾಮಸ್ಥರು ಸಾಗರ ತಹಸೀಲ್ದಾರ್ ಚಂದ್ರಶೇಖರನಾಯ್ಕಗೆ ಮನವಿ ಸಲ್ಲಿಸಿದರು. ವೆಂಕಟೇಶ್ ಮೆಳವರಿಗೆ, ಬರಗಿ ನಾರಾಯಣಪ್ಪ, ಎಂ.ಎನ್.ದೀಪಕ್, ಎಂ.ಕೆ.ಅಣ್ಣಪ್ಪ, ಎಂ.ಹಾಲಪ್ಪ ಇತರರಿದ್ದರು.  
ಜಿಲ್ಲೆ

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ

Shivamogga - Desk - Vinayakumar D B

ಸಾಗರ: ತಾಲೂಕಿನ ಮಾಸೂರು ಗ್ರಾಮದ ಸರ್ವೇ ನಂ.105ರಲ್ಲಿರುವ 8 ಎಕರೆ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಮಾತನಾಡಿ, ಎಂಟು ಎಕರೆ ಜಮೀನು ಗೇರು ಸಾಗುವಳಿಗಾಗಿ ಷರತ್ತಿನ ಮೇರೆಗೆ 1963-64ರಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಮಂಜೂರಾಗಿತ್ತು. ಖಾಸಗಿ ವ್ಯಕ್ತಿಯು 2023ರವರೆಗೆ ಉದ್ದೇಶಿತ ಜಮೀನಿನಲ್ಲಿ ಯಾವುದೇ ಕೃಷಿ ಚಟುವಟಿಕೆ ಕೈಗೊಂಡಿರಲಿಲ್ಲ. ಎಂಟು ಎಕರೆ ಪ್ರದೇಶವನ್ನು ಮೆಳವರಿಗೆ ಗ್ರಾಮಸ್ಥರು ರಕ್ಷಣೆ ಮಾಡಿಕೊಂಡು ಜಾನುವಾರುಗಳನ್ನು ಮೇಯಿಸಲು, ಹುಲ್ಲು, ಸೊಪ್ಪು ಇತ್ಯಾದಿ ಉಪಯೋಗಕ್ಕಾಗಿ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಸದರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬ ವ್ಯಕ್ತಿಗೆ ಪರಾಭಾರೆ ಮಾಡಿದ್ದಾರೆ. ನಕಲಿ ದಾಖಲೆ ಮೂಲಕ ಜಮೀನು ಸ್ವಾಧೀನಕ್ಕೆ ಪಡೆದಿರುವ ವ್ಯಕ್ತಿಯು ಜೆಸಿಬಿ, ಹಿಟಾಚಿ, ಟ್ರಾೃಕ್ಟರ್ ಬಳಸಿ ಜಮೀನು ಸಮತಟ್ಟುಪಡಿಸುವ ಮೂಲಕ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಈ ಜಾಗವು ಗೇರು ಸಾಗುವಳಿಗೆ ನೀಡಿದ್ದಾಗಿದ್ದರೂ ಮಂಜೂರಾತಿ ಆದೇಶವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಕ್ಷಣ ಸರ್ಕಾರ ಜಮೀನು ವಾಪಾಸ್ ಪಡೆದು ಸರ್ಕಾರದ ಸ್ವಾಮ್ಯಕ್ಕೆ ತೆಗೆದುಕೊಳ್ಳಬೇಕು. ಜಮೀನನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಬರಗಿ ನಾರಾಯಣಪ್ಪ, ಉಪಾಧ್ಯಕ್ಷ ಎಂ.ಎನ್.ದೀಪಕ್, ಕಾರ್ಯದರ್ಶಿ ಎಂ.ಕೆ.ಅಣ್ಣಪ್ಪ, ಎಂ.ಹಾಲಪ್ಪ ಇತರರಿದ್ದರು.