ಜಿಲ್ಲೆ

ಕೆರೆ, ನೀರುಗಾಲುವೆಗಳ ಒತ್ತುವರಿ ತೆರವಿಗೆ ಕಟ್ಟಾಜ್ಞೆ; ತುಷಾರ್ ಗಿರಿನಾಥ್ ತಾಕೀತು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆ ಹಾಗೂ ಕೆರೆಗಳ ಒತ್ತುವರಿ ತೆರವು ವಿಚಾರಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಬೃಹತ್ ನೀರುಗಾಲುವೆ, ಕೆರೆಗಳ ಒತ್ತುವರಿ ತೆರವು, ಪ್ರವಾಹಪೀಡಿತ ಸೂಕ್ಷ್ಮ ಪ್ರದೇಶಗಳು ಹಾಗೂ ರಸ್ತೆಗುಂಡಿ ಮುಚ್ಚುವ ವಿಚಾರವಾಗಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯ ಆಯುಕ್ತರು ಪಾಲ್ಗೊಂಡು ಮಾತನಾಡಿದರು.

ನೀರುಗಾಲುವೆ ಒತ್ತುವರಿ ತೆರವು ಕಾರ್ಯಚರಣೆ ಸಂಬಂಧ ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತಹಶಿಲ್ದಾರ್‌ರವರು ತೆರವು ನೋಟಿಸ್ ಜಾರಿ ಮಾಡಿದ ನಂತರ ಕಾರ್ಯಪಾಲಕ ಅಭಿಯಂತರರಿಗೆ ರಾಜಕಾಲುವೆಯ ಒತ್ತುವರಿ ತೆರವು ಜವಾಬ್ದಾರಿ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕು. ಜತೆಗೆ ವಿಭಾಗದ ಕಾರ್ಯಪಾಲಕ ಅಭಿಯಂತರರು 10 ದಿನಗಳಲ್ಲಿ ಹೊಸ ಒತ್ತುವರಿಯನ್ನೂ ಗುರುತಿಸಬೇಕಿದ್ದು, ಇದು ಕೊನೆಯ ಅವಕಾಶವಾಗಿರುತ್ತದೆ. ಒಂದು ವೇಳೆ ತೆರವು ಕಾರ್ಯಾಚರಣೆ ಮಾಡುವಲ್ಲಿ ವಿಫಲವಾದಲ್ಲಿ ಆಯಾ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆರೆಗಳಲ್ಲಿ ಯಾವ್ಯಾವ ಕೆರೆಯಲ್ಲಿ ಒತ್ತುವರಿ ಆಗಿದೆ ಎಂಬುದರ ಬಗ್ಗೆ ಕೆರೆ ವಿಭಾಗದ ಕಾರ್ಯಪಾಲಕ ಅಭಿಯಂತರರು 3 ದಿನಗಳಲ್ಲಿ ಆಯಾ ವಲಯ, ಉಪ ವಿಭಾಗಗಳಲ್ಲಿ ಬರುವ ಕಾರ್ಯಪಾಲಕ ಅಭಿಯಂತರರಿಗೆ 7 ದಿನದೊಳಗಾಗಿ ಒತ್ತುವರಿಯಾಗಿರುವ ಮಾಹಿತಿ ನೀಡಬೇಕು. ಆ ಬಳಿಕ ತಹಶೀಲ್ದಾರರು 7 ದಿನಗಳಲ್ಲಿ ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ, ಅವುಗಳ ತೆರವಿಗೆ ನೋಟಿಸ್ ಜಾರಿಗೊಳಿಸಬೇಕು. ಅನಂತರ ಸಕ್ಷಮ ಪ್ರಾಧಿಕಾರದಡಿ ಕಾಲಾವಕಾಶ ನೀಡಿ ಒತ್ತುವರಿ ತೆರವಾಗದಿದ್ದಲ್ಲಿ ಕೂಡಲೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹಪೀಡಿತ ಪ್ರದೇಶ ಪರಿಶೀಲಿಸಿ:

ನಗರದಲ್ಲಿ 198 ಪ್ರವಾಹ ಪೀಡಿತದ ಸೂಕ್ಷ್ಮ ಪ್ರದೇಶಗಳ ಪೈಕಿ 124 ಸ್ಥಳಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಾಕಿಯಿರುವ 74 ಪ್ರಕರಣಗಳಲ್ಲಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಆಯಾ ವಲಯ ವ್ಯಾಪ್ತಿಯ ಹಿರಿಯ ಅಧಿಕಾರಿಗಳು ಪ್ರಮುಖ ಪ್ರವಾಹ ಪೀಡಿದ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ತ್ವರಿತಗತಿಯಲ್ಲಿ ರಸ್ತೆಗುಂಡಿ ಮುಚ್ಚಿರಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಸಂಬಂಧ ಆಯಾ ವಲಯದ ಎಲ್ಲ ಮುಖ್ಯ ಅಭಿಯಂತರರು ಸೂಕ್ತ ಕ್ರಮ ಕೈಗೊಳ್ಳಬೇಕು. ಫಿಕ್ಸ್ ಮೈ ಸ್ಟ್ರೀಟ್ ತಂತ್ರಾಂಶದಲ್ಲಿ ಬರುವಂಥ ದೂರು ಆಧರಿಸಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಈ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಗುತ್ತಿಗೆದಾರರಿಂದ ರಸ್ತೆಗುಂಡಿಗಳನ್ನು ಮುಚ್ಚಿಸಬೇಕು ಹಾಗೂ ದೋಷ ಮುಕ್ತ ಅವಧಿ (ಡಿಎಲ್ಪಿ)ಯಲ್ಲಿರುವ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಂದಲೇ ಕೆಲಸ ಮಾಡಿಸಬೇಕು ಎಂದು ಮುಖ್ಯ ಆಯುಕ್ತರು ತಾಕೀತು ಮಾಡಿದ್ದಾರೆ.