ಜಿಲ್ಲೆ

ಮೈಸೂರು ದಸರಾ: ಬೆಳಗಾಗುವುದರೊಳಗೆ ಮೈಸೂರು ನಗರ ಸ್ವಚ್ಛ..!

Mysuru
  • ದಸರೆಯಲ್ಲಿ ಹಗಲು, ರಾತ್ರಿ ದುಡಿದ ಪೌರ ಕಾರ್ಮಿಕರು
  • ಜಂಬೂಸವಾರಿ ಮಾರ್ಗ ಶುಚಿಗೊಳಿಸಲು ವಿಶೇಷ ತಂಡ

ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿ ಮೆರವಣಿಗೆಯನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಸಣ್ಣ ಸಮಾರಂಭವೊಂದನ್ನು ಆಯೋಜಿಸಿದರೂ ಅಲ್ಲಿ ತ್ಯಾಜ್ಯ ರಾಶಿಯೇ ಬಿದ್ದಿರುತ್ತದೆ. ಇನ್ನು ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿದರೆ ಉತ್ಪತಿಯಾಗುವ ತ್ಯಾಜ್ಯದ ರಾಶಿಯನ್ನು ಕಲ್ಪನೆ ಸಹ ಮಾಡಲು ಸಾಧ್ಯವಿಲ್ಲ. ಆದರೆ ಪೌರ ಕಾರ್ಮಿಕರು ಹಗಲು ರಾತ್ರಿ ಎನ್ನದೆ ದುಡಿದ ಪರಿಣಾಮ ದಸರಾ ಮುಗಿದ ಮರುದಿನ ನಗರ ಸಂಪೂರ್ಣ ಸ್ವಚ್ಛವಾಗಿತ್ತು..!

ನಗರದಲ್ಲಿ ಪ್ರತಿನಿತ್ಯ 450 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ದೇವರಾಜ ಮಾರುಕಟ್ಟೆಯಲ್ಲಿ ಪ್ರತಿನಿತ್ಯ 3 ರಿಂದ 4 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ಬುಧವಾರ ಸಯ್ಯಜಿರಾವ್ ರಸ್ತೆಯೊಂದರಲ್ಲಿಯೇ 3.50 ಟನ್ ತ್ಯಾಜ್ಯ ಸಂಗ್ರಹವಾಗಿತ್ತು. ಅರಮನೆ ಆವರಣದಲ್ಲಿ 1 ಟನ್ ತ್ಯಾಜ್ಯ ಸಂಗ್ರಹವಾಗಿತ್ತು. ಈ ಪೈಕಿ ಪ್ಲಾಸ್ಟಿಕ್ ಬಾಟಲ್ ಹಾಗೂ ತಿಂಡಿ ತಿನಿಸುಗಳ ಪಾಕೆಟ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇತ್ತು. ಪೌರ ಕಾರ್ಮಿಕರು ದಸರಾ ಪ್ರಾರಂಭವಾದ ದಿನದಿಂದ ಸ್ವಚ್ಛತಾ ಕಾರ್ಯದಲ್ಲಿ ಹಗಲಿರುಳು ದುಡಿದರು. ವಿಶೇಷವಾಗಿ ಜಂಬೂಸವಾರಿ ದಿನದಂದು ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗೆ 3.30ರವರೆಗೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾದರು. ಹೀಗಾಗಿ ಬೆಳಗ್ಗೆ ನಗರಕ್ಕೆ ಆಗಮಿಸಿದ ಜನರಿಗೆ ತ್ಯಾಜ್ಯದ ರಾಶಿ ಕಂಡು ಬರಲಿಲ್ಲ.

ಈ ಮಾರ್ಗದಲ್ಲಿ ಮಾರ್ಗದಲ್ಲಿ ಯುಜಿಡಿ ಸಮಸ್ಯೆ ಕಂಡುಬಂದರೆ ತಕ್ಷಣ ಸರಿಪಡಿಸಲು ನಾಲ್ಕು ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರವನ್ನು ಬಳಕೆ ಮಾಡಲಾಯಿತು. ಕಸ ತುಂಬಲು 10 ಆಟೋ, 4 ಕಾಂಪೆಕ್ಟರ್‌ಗಳನ್ನು ಬಳಕೆ ಮಾಡಲಾಯಿತು. ಸ್ವಚ್ಛತೆಯಲ್ಲಿ ಪ್ರತಿ ಬಾರಿ ಮೈಸೂರು ದೇಶದ ಗಮನ ಸೆಳೆಯುತ್ತಿದೆ. ಇದಕ್ಕೆ ಪೌರ ಕಾರ್ಮಿಕರ ಪರಿಶ್ರಮ ಅಪಾರವಾದದ್ದು. ಪ್ರತಿ ವರ್ಷ ದಸರಾ ಸಂದರ್ಭದಲ್ಲೂ ಸ್ವಚ್ಛತೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಪೌರ ಕಾರ್ಮಿಕರು ದುಡಿಯುತ್ತಾರೆ. ಈ ಬಾರಿಯೂ ಸ್ವಚ್ಛತೆಯಲ್ಲಿ ಯಾವುದೇ ರೀತಿಯ ಲೋಪವಾಗ ದಂತೆ ಪೌರ ಕಾರ್ಮಿಕರು ನೋಡಿಕೊಂಡರು.

ದಸರಾ ಸಂದರ್ಭ ನಗರಕ್ಕೆ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ. ಒಂದುವೇಳೆ ಪೌರ ಕಾರ್ಮಿಕರು ಒಂದು ದಿನ ಮೈ ಮರೆತರೂ ಪ್ರವಾಸಿಗರ ಕಣ್ಣಿಗೆ ‘ದಸರೆ ವೈಭವ’ ಕಾಣುವುದಿಲ್ಲ, ಬದಲಿಗೆ ತ್ಯಾಜ್ಯದ ರಾಶಿ ಮಾತ್ರ ಕಾಣುತ್ತದೆ. ಆದರೆ, ಒಂದು ವರ್ಷ ಸಹ ಅಂತಹ ವಾತಾವರಣ ನಿರ್ಮಾಣಕ್ಕೆ ಪೌರ ಕಾರ್ಮಿಕರು ಅವಕಾಶ ನೀಡಲಿಲ್ಲ. ಇಡೀ ನಗರ ದಸರೆಯ ಸಂಭ್ರಮದಲ್ಲಿ ಮುಳುಗಿರುವಾಗ ಪೌರ ಕಾರ್ಮಿಕರು ಸ್ವಚ್ಛತೆ ಮೂಲಕ ಬೆವರು ಹರಿಸಿದರು. ಆ ಮೂಲಕ ನಗರದ ಹಿರಿಮೆ ಎತ್ತಿ ಹಿಡಿದರು.

ಹಗಲು, ರಾತ್ರಿ ಸ್ವಚ್ಛತಾ ಕಾರ್ಯ: ದಸರಾ ಉತ್ಸವ ಸಂದರ್ಭ ನಗರದ ಪ್ರಮುಖ ರಸ್ತೆಗಳು, ಯುವ ಸಂಭ್ರಮ, ಯುವ ದಸರಾ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ ಸೇರಿದಂತೆ ವಿವಿಧೆಡೆ ಸ್ವಚ್ಛತೆಗೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿತ್ತು. ಹೀಗಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ತ್ಯಾಜ್ಯದ ರಾಶಿ ಕಂಡು ಬರಲಿಲ್ಲ.
ಸ್ವಚ್ಛತೆ ಕುರಿತು ಅರಿವು: ದಸರಾ ಉತ್ಸವದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಮಾತ್ರವಲ್ಲದೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸಹ ನಗರ ಪಾಲಿಕೆಯಿಂದ ಕೈಗೊಳ್ಳಲಾಯಿತು. ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದ ವಿವಿಧೆಡೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಅಲ್ಲದೆ ನಗರವನ್ನು ಶುಚಿಯಾಗಿಡಲು ಸಹಕರಿ ಸುವಂತೆ ಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯ ಸಹ ನಡೆಯಿತು.

ಎಂದಿನಂತೆ ಈ ಬಾರಿಯೂ ದಸರಾ ಜಂಬೂಸವಾರಿ ಮೆರವಣಿಗೆಯ ನಂತರ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನಡೆದಿದೆ. ಪೌರ ಕಾರ್ಮಿಕರು ಗುರುವಾರ ಬೆಳಗ್ಗೆ 3.30ರವರೆಗೆ ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಾಗಿ ಜಂಬೂಸವಾರಿ ಹಾದು ಹೋದ ಸಯ್ಯಜಿರಾವ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಬೆಳಗ್ಗೆ ಸಂಪೂರ್ಣ ಸ್ವಚ್ಛವಾಗಿತ್ತು. ಪೌರ ಕಾರ್ಮಿಕರ ಪರಿಶ್ರಮದಿಂದ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಾಗಿದೆ. ಹೀಗಾಗಿ ಅವರ ಪರಿಶ್ರಮಕ್ಕೆ ಧನ್ಯವಾದ ಸಮರ್ಪಿಸಲು ಬಯಸುತ್ತೇನೆ. ಕೇವಲ ಜಂಬೂಸವಾರಿ ದಿನದಂದು ಮಾತ್ರವಲ್ಲದೆ ಹತ್ತು ದಿನಗಳ ಕಾಲ ನಡೆದ ದಸರಾ ಉತ್ಸವ ಸಂದರ್ಭ ನಗರವನ್ನು ಶುಚಿಯಾಗಿಡಲು ಪೌರ ಕಾರ್ಮಿಕರು ಸಾಕಷ್ಟು ಶ್ರಮಿಸಿದ್ದಾರೆ.

ಡಾ.ಡಿ.ಜಿ. ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ