ನಂಜನಗೂಡು : ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶ ವ್ಯಾಪ್ತಿಯಲ್ಲಿರುವ ಹೆಡಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡಿಯಾಲ ಗ್ರಾಮದ ಬಸ್ ನಿಲ್ದಾಣ ಸೇರಿದಂತೆ ಹಲವು ಭಾಗಗಳಲ್ಲಿ ಕಸದ ರಾಶಿ ತುಂಬಿ ಹೋಗಿದೆ. ಗ್ರಾಮಸ್ಥರು ಮತ್ತು ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹತ್ತಾರು ಹಳ್ಳಿಗಳ ಜನರು ಬೇರೆಡೆಗೆ ತೆರಳಲು ಬಂದು ನಿಲ್ಲುವ ಕೇಂದ್ರ ಸ್ಥಾನ ಇದಾಗಿದೆ. ನಂಜನಗೂಡು, ಸರಗೂರು ಮತ್ತು ಗುಂಡ್ಲುಪೇಟೆ ಮೂರು ತಾಲೂಕುಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ತುಂಬಿ ಹೋಗಿರುವ ಕಸದ ರಾಶಿ ದರ್ಶನ ಕೊಡುವುದಲ್ಲದೆ ವಿಪರೀತ ವಾಸನೆ ಬರುತ್ತಿದೆ. ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಬಸ್ ನಿಲ್ದಾಣ ಹಾಗೂ ಬೇಗೂರು ರಸ್ತೆಯ ಸರ್ಕಾರಿ ಶಾಲೆಯ ಕಾಂಪೌಂಡ್ ಎರಡು ಬದಿಗಳಲ್ಲಿ ಸಾಕಷ್ಟು ಟನ್‌ಗಟ್ಟಲೆ ಕಸ ಕೊಳೆತು ನಾರುತ್ತಿದೆ.
ಹೆಚ್ಚುವರಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷೃದಿಂದ ಮೂಲ ಸೌಲಭ್ಯಗಳು ಮಾಯವಾಗಿವೆ. ಶುಚಿತ್ವದ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ ಕೊಳೆತು ಗಬ್ಬೆದ್ದು ನಾರುತ್ತಿರುವ ತ್ಯಾಜ್ಯ ಶುಚಿಗೊಳಿಸದ ಕಾರಣ ಸಾರ್ವಜನಿಕರು ಬಾಯಿ ಮುಚ್ಚಿ ಓಡಾಡುವ ದುಸ್ಥಿತಿ ಎದುರಾಗಿದೆ.
ಅಭಿವೃದ್ಧಿಗೆ ಬಿಡುಗಡೆಯಾದ ಹಣ ಯಾರ ಜೇಬು ಸೇರಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಕೂಡಲೇ ನಂಜನಗೂಡಿನ ಶಾಸಕ ದರ್ಶನ ಧ್ರುವನಾರಾಯಣ ಎಚ್ಚೆತ್ತು ಹೆಡಿಯಾಲ ಗ್ರಾಮ ಪಂಚಾಯಿತಿ ಯತ್ತ ಗಮನಹರಿಸಿ ಮೂಲಸೌಕರ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸಬೇಕು. ಇಲ್ಲವಾದಲ್ಲಿ ಜನರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಪ್ರತಿ ಎರಡು ದಿನಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತಿದ್ದು, ಕಳೆದ ಎರಡು, ಮೂರು ದಿನಗಳಿಂದ ಮಳೆ ಹೆಚ್ಚಾಗಿದ್ದ ಕಾರಣ ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ. ತಕ್ಷಣವೇ ಈಗ ಕ್ರಮ ಕೈಗೊಂಡು ಸ್ವಚ್ಛಗೊಳಿಸುತ್ತೇವೆ.
ಬಸಪ್ಪ, ಕಾರ್ಯದರ್ಶಿ, ಹೆಡಿಯಾಲ ಗ್ರಾಪಂ
ಸಾರ್ವಜನಿಕರು ನಿಲ್ಲುವ ಸ್ಥಳದಲ್ಲಿಯೇ ಸಾಕಷ್ಟು ಕಸದ ರಾಶಿಯ ತ್ಯಾಜ್ಯ ಕೊಳೆತು ಗಬ್ಬೆತು ನಾರುತ್ತಿದೆ. ಬಸ್ ನಿಲ್ದಾಣದ ಖಾಲಿ ನಿವೇಶನ ಖಾಸಗಿ ವ್ಯಕ್ತಿಯ ಪಾಲಾಗಿದೆ. ಸಾಕಷ್ಟು ಸಮಸ್ಯೆಗಳು ತಾಂಡವ ವಾಡುತ್ತಿದ್ದು ಸ್ಥಳೀಯ ಶಾಸಕರು ಎಚ್ಚೆತ್ತು ಸಮಸ್ಯೆಗೆ ಮುಕ್ತಿ ನೀಡಬೇಕಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಪಂ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ.
ಆನಂದ, ಹೆಡಿಯಾಲ ಗ್ರಾಮದ ನಿವಾಸಿ