ಮೈಸೂರು: ದೇಶದ ವಿವಿಧ ನಗರಗಳು ಸ್ವಚ್ಛತೆಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡುತ್ತಿವೆ ಎಂದು ಅರಿಯಲು ಸ್ವಚ್ಛ ಸರ್ವೇಕ್ಷಣೆಯ ತಂಡ ದೇಶದ ವಿವಿಧ ನಗರಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದು, ಮಂಗಳವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ ಸಮೀಕ್ಷೆ ಪ್ರಾರಂಭಿಸಿದೆ.
ದೇಶದಲ್ಲಿ ಫೆ.15 ರಿಂದ ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆ ಪ್ರಾರಂಭಗೊಂಡಿದ್ದು, ಮೇ ಅಂತ್ಯದವರೆಗೆ ನಡೆಯಲಿದೆ. ನಗರ ಆಗಮಿಸಿದ ಕೇಂದ್ರದ ತಂಡ ನಗರದ ವಿವಿಧ ಬಡಾವಣೆಗಳು, ರಸ್ತೆಗಳು, ನಗರದ ಸಾರ್ವಜನಿಕ ಶೌಚಗೃಹಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಖುದ್ದಾಗಿ ಪರಿಶೀಲಿಸಿದರು.
ಜನಾಭಿಪ್ರಾಯ ಸಂಗ್ರಹ: ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಸಂದರ್ಭ ಸ್ವಚ್ಛತೆ ಕುರಿತು ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿದೆ. ಪ್ರತಿನಿತ್ಯ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆಯೇ? ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಡೆಯಲಾಗುತ್ತಿದೆಯೇ? ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದೆಯೇ? ಸಾರ್ವಜನಿಕ ಶೌಚಗೃಹಗಳು ಬಳಕೆ ಯೋಗ್ಯವಾಗಿದೆಯೇ ಎಂಬ ಕುರಿತು ಮಾಹಿತಿ ಸಂಗ್ರಹಿಸಿದರು.
ಈ ಬಾರಿಯ ಥೀಮ್ ಏನು?: ಈ ಬಾರಿ ರೆಡ್ಯೂಸ್ (ಕಡಿಮೆ ಮಾಡು), ರೀಯೂಸ್ (ಮರುಬಳಕೆ) ಮತ್ತು ರೀಸೈಕಲ್ (ಪುನರ್ಬಳಕೆ) ಥೀಮ್‌ನಡಿ ಸ್ವಚ್ಛ ಸರ್ವೇಕ್ಷಣೆ ನಡೆಯುತ್ತಿದೆ. ಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯು ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆಯಲ್ಲಿ ನಡೆದಿತ್ತು. ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ರೆಡ್ಯೂಸ್, ರೀಯೂಸ್ ಹಾಗೂ ರೀಸೈಕಲ್ ಮಾಡಿದರೆ ಪರಿಸರ ಮಾಲಿನ್ಯದ ಪ್ರಮಾಣ ತಗ್ಗಿಸಬಹುದು ಎಂಬುದು ಈ ಬಾರಿಯ ಪರಿಕಲ್ಪನೆಯಾಗಿದೆ.
12,500 ಅಂಗಳಿಗೆ ನಡೆಯುತ್ತಿದೆ ಸ್ಪರ್ಧೆ: ಈ ಬಾರಿಯ ಸ್ವಚ್ಛ ಸರ್ವೇಕ್ಷಣೆ ಒಟ್ಟು 12,500 ಅಂಕಗಳಿಗೆ ನಡೆಯುತ್ತಿದೆ. 1 ರಿಂದ 4 ಹಂತಗಳಿಗೆ ಒಟ್ಟು 10,000 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ 2,500 ಅಂಕಗಳ ಪೈಕಿ ಒಡಿಎಫ್, ಒಡಿಎಫ್ +, ಒಡಿಎಫ್++, ವಾಟರ್+ಗೆ 1,200 ಅಂಕಗಳು, ತ್ಯಾಜ್ಯ ಮುಕ್ತ ನಗರಕ್ಕೆ 1,300 ಅಂಕಗಳನ್ನು ಹಂಚಿಕೆ ಮಾಡಲಾಗಿದೆ. 1 ರಿಂದ 4ರವರೆಗಿನ ಹಂತಗಳಲ್ಲಿ ಬರುವ 10,000 ಅಂಕಗಳನ್ನು 10 ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ವಿಜಿಬಲ್ ಕ್ಲೀನ್ಲಿನೆಸ್ (ಬಡಾವಣೆ, ವಾಣಿಜ್ಯ ಪ್ರದೇಶಗಳನ್ನು ದಿನನಿತ್ಯ ಶುಚಿಗೊಳಿಸುವುದು ಹಾಗೂ ಇತ್ಯಾದಿ)ಗೆ 1,500 ಅಂಕಗಳು, ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ ಹಾಗೂ ಸಾಗಾಟಕ್ಕೆ 1,000, ಘನತ್ಯಾಜ್ಯ ನಿರ್ವಹಣೆಗೆ 1,500, ಆ್ಯಕ್ಸಸಸ್ ಟು ಸ್ಯಾನಿಟೇಷನ್ (ಶೌಚಗೃಹಗಳ ಉತ್ತಮ ನಿರ್ವಹಣೆ)ಗೆ 1,000, ಮಲಿನ ನೀರಿನ ನಿರ್ವಹಣೆಗೆ 1,000, ತ್ಯಾಜ್ಯ ವಿಲೇವಾರಿ ಸೇವೆಗಳ ಯಾಂತ್ರೀಕರಣಕ್ಕೆ 500, ಅಡ್ವೋಕೆಸಿ ಆಫ್ ಸ್ವಚ್ಛತಾ (ಸ್ವಚ್ಛತಾ ಆ್ಯಪ್ ಬಳಕೆ, ಸ್ವಚ್ಛತೆ ಕುರಿತು ಜನಜಾಗೃತಿ ಹಾಗೂ ಇತ್ಯಾದಿ)ಗೆ 1,500, ಇಕೋ ಸಿಸ್ಟಮ್ ಸ್ಟ್ರೆಂಥನಿಂಗ್ ಆ್ಯಂಡ್ ಇನ್‌ಸ್ಟಿಟ್ಯೂಷನಲ್ ಪ್ಯಾರಾಮೀಟರ್ಸ್ (ಅನೈರ್ಮಲ್ಯ ಸೃಷ್ಟಿಸುವವರಿಗೆ ದಂಡ ವಿಧಿಸುವುದು, ಸ್ವಚ್ಛ ವಾರ್ಡ್ ರ‌್ಯಾಂಕಿಂಗ್)ಗೆ 1,000, ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕೆ 5,00, ಸಿಟಿಜನ್ ಫೀಡ್‌ಬ್ಯಾಕ್‌ಗೆ 500 ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ: ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು 2015, 2016ರಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8, 2019ರಲ್ಲಿ 3, 2020ರಲ್ಲಿ 5, 2020ರಲ್ಲಿ 5, 2021ರಲ್ಲಿ 11, 2022ರಲ್ಲಿ 8, 2023ರಲ್ಲಿ 27ನೇ ಸ್ಥಾನ ಪಡೆಯಿತು. ಇದೀಗ 2024ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆ ನಡೆಯುತ್ತಿದ್ದು, ನಗರ ಈ ಬಾರಿ ರಾಷ್ಟ್ರಮಟ್ಟದಲ್ಲಿ ಯಾವ ಸ್ಥಾನ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಯ ಸಮೀಕ್ಷೆಗೆ ಕೇಂದ್ರ ತಂಡ ನಗರಕ್ಕೆ ಮಂಗಳವಾರ ಆಗಮಿಸಿ ಸಮೀಕ್ಷೆ ಪ್ರಾರಂಭಿಸಿದ್ದಾರೆ. ಕೇಂದ್ರ ತಂಡ ಒಂದು ವಾರ ನಗರದಲ್ಲಿ ಇದ್ದು, ಸಮೀಕ್ಷೆ ನಡೆಸಲಿದ್ದಾರೆ. ವಿವಿಧ ಬಡಾವಣೆಗಳು, ವಾಣಿಜ್ಯ ಪ್ರದೇಶಗಳು, ಪ್ರಮುಖ ರಸ್ತೆಗಳು, ಸಾರ್ವಜನಿಕ ಶೌಚಗೃಹಗಳ ಸ್ವಚ್ಛತೆಯನ್ನು ಪರಿಶೀಲಿಸುತ್ತಿದ್ದು, ಅವರಿಗೆ ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ