ಜಿಲ್ಲೆ

ನಾವೂರಿನಲ್ಲಿ ಶೌರ್ಯ ತಂಡದಿಂದ ಶ್ರಮದಾನ

ಸೌಮ್ಯ ಆರ್

ಬಂಟ್ವಾಳ: ಹನ್ನೆರಡು ವರ್ಷಗಳಿಂದ ಸ್ವಚ್ಛಗೊಳಿಸದೇ ಉಳಿದಿದ್ದ ನಾವೂರು ಗ್ರಾಮದ ಕುಡಿಯುವ ನೀರು ಪೂರೈಸುವ ಮೇಲ್‌ಸ್ಥರದ ಟ್ಯಾಂಕನ್ನು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ಘಟಕದ ನಾವೂರು ಶೌರ್ಯ ತಂಡ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದೆ.

ನಾವೂರು ಶಾಲೆ ಬಳಿ ನೇತ್ರಾವತಿ ನದಿ ಸಮೀಪದ ಎತ್ತರ ಪ್ರದೇಶದಲ್ಲಿ ನಾವೂರು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಇದೆ. ಟ್ಯಾಂಕ್‌ನ ಸುತ್ತಮುತ್ತ ಕಳೆಗಿಡಗಳು, ಪೊದೆಗಳು ಬೆಳೆದು ಹತ್ತಿರಕ್ಕೆ ಹೋಗಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಟ್ಯಾಂಕನ್ನು ಸ್ವಚ್ಛಗೊಳಿಸದೇ 12 ವರ್ಷಗಳೇ ಕಳೆದಿವೆ ಎನ್ನುತ್ತಾರೆ ಸ್ಥಳೀಯರು. ಇದನ್ನರಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಪರಿಸರ ಸ್ವಚ್ಛಗೊಳಿಸುವುದರ ಜತೆಗೆ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಾಲಕೃಷ್ಣ, ಮೇಲ್ವಿಚಾರಕಿ ರೂಪಾ ಜೆ.ಭೇಟಿ ನೀಡಿದರು. ಶೌರ್ಯ ತಂಡದ ಅಧ್ಯಕ್ಷ ಭಾಸ್ಕರ್, ಸೇವಾ ಪ್ರತಿನಿಧಿಗಳಾದ ವಿಜಯಾ, ವಸಂತಿ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ಗೌಡ ನಾವೂರು, ನಾವೂರು ಗ್ರಾಪಂ ಸದಸ್ಯರಾದ ತ್ರಿವೇಣಿ, ಜನಾರ್ದನ ಹಾಗೂ ತಂಡದ ಸದಸ್ಯರು ಶ್ರಮದಾನದಲ್ಲಿ ತೊಡಗಿಸಿಕೊಂಡರು.

ನಾವೂರಿನ ಟ್ಯಾಂಕನ್ನು ಸ್ವಚ್ಛಗೊಳಿಸದೆ 12 ವರ್ಷಗಳಾಯಿತು. ಶೌರ್ಯ ತಂಡದ ಮೂಲಕ ಈ ಟ್ಯಾಂಕನ್ನು ಸ್ವಚ್ಛಗೊಳಿಸಲಾಯಿತು. ಟ್ಯಾಂಕ್‌ನ ಸುತ್ತ ಗಿಡಗಳು ಬೆಳೆದು ಹತ್ತಿರ ಬಾರದಂಥ ಸ್ಥಿತಿ ಇತ್ತು. ಕಳೆ ಗಿಡಗಳನ್ನು ಸ್ವಚ್ಛಗೊಳಿಸಿದ್ದೇವೆ. ಶೌರ್ಯ ತಂಡದ ಮೂಲಕ ನಾವೂರು ಶಾಲೆಯಲ್ಲಿ ಅಂಗಣ ಸ್ವಚ್ಛತೆ, ಚರಂಡಿ ದುರಸ್ತಿ, ಮಳೆಗೆ ಕುಸಿದ್ದು ಬಿದ್ದ ಮನೆ ದುರಸ್ತಿ ಕಾರ್ಯ ಶೌರ್ಯ ತಂಡದ ಮೂಲಕ ನಡೆಸಿದ್ದೇವೆ. - ಭಾಸ್ಕರ, ಅಧ್ಯಕ್ಷರು ಶೌರ್ಯ ತಂಡ, ನಾವೂರು ಘಟಕ